ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು
*_ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು_*
✍️ ನಾಗೇಂದ್ರ ಬಂಜಗೆರೆ
*ಇದು 'ನಕಲಿಯುಗ'.. ಆದರೆ ಅದ್ಯಾರೋ ಹಿರಿಯರು ಇದನ್ನು 'ಕಲಿಯುಗ' ಎಂದು ಕರೆದಿರಬೇಕು.,ಈ ಮಾತನ್ನು ಯಾಕೆ ಹೇಳಬೇಕೆನಿಸುತ್ತಿದೆ ಎಂದರೆ ನಾವು ವ್ಯವಹರಿಸುವ ಹಣದಲ್ಲಿ ಹಲವಾರು ಮುಖಬೆಲೆಯ ಖೋಟ ನೋಟುಗಳನ್ನ ಬಳಸಿ ಅಸಲಿ ನೋಟುಗಳಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದನ್ನು ಕೇಳಿದ್ದೇವೆ. ನೋಡಿದ್ದೇವೆಯೂ ಕೂಡ. ಈಗಂತೂ ನಾವು ಬಳಸುವ ಎಲ್ಲ ವಸ್ತುಗಳಲ್ಲೂ ನಕಲಿ ಯಾವುದು ಅಸಲಿ ಯಾವುದು ಅಂತ ಹುಡುಕುತ್ತಿರುವಾಗ ಇತ್ತೀಚಿನ ದಿನಗಳಲ್ಲಿ ನಕಲಿಗಳ ಪಟ್ಟಿಗೆ ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿಯೂ ನಕಲಿ ಆದದ್ದು ನಮಗೆಲ್ಲ ಗೊತ್ತೇ ಇದೆ. ನಾನು ಶಿಕ್ಷಕ ವೃತ್ತಿಗೆ ಸೇರಿ ಹದಿನೇಳು ಸಂವತ್ಸರ ಕಳೆಯಿತು.ನನ್ನ ಅನೇಕ ಶಿಷ್ಯೋತ್ತಮರು ಸರ್ಕಾರಿ ನೌಕರಿಯನ್ನು ಪಡೆದಿದ್ದಾರೆ. ಇನ್ನೂ ಕೆಲವರು ಮೆಡಿಕಲ್,ಇಂಜಿನಿಯರಿಂಗ್, ಡಿಪ್ಲೋಮಾ ,ಐಟಿಐ ಪದವಿಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಗಣನೀಯ ಪ್ರಮಾಣದ ಶಿಷ್ಯಂದಿರು ಲಾರಿ ಡ್ರೈವರ್,ಕ್ಲೀನರ್ ಓನರ್ ಆಗಿಯೂ,ಕೂಲಿ ನಾಲಿ ಮಾಡುತ್ತಾ, ಇನ್ನೂ ಕೆಲವರು ಕುರಿಸಾಕಿಕೊಂಡು ಬದುಕನ್ನು ಕಂಡುಕೊಂಡಿದ್ದಾರೆ. ಈ ಮೊದಲು ನಾನು ಕೆಲಸ ಮಾಡುತ್ತಿದ್ದುದೊಂದು ಗುಡ್ಡಗಾಡು ಪ್ರದೇಶ. ತಾಲ್ಲೂಕು ಕೇಂದ್ರದಿಂದ 40 km ಅಂತರ ಇದ್ದುದರಿಂದ SSLC,PUC,KPSC ಇಂತಹ ಪರೀಕ್ಷಾ ಕರ್ತವ್ಯದಿಂದ ದೂರವೇ ಉಳಿದಿದ್ದ ನನಗೆ ಕಳೆದ ಮಾರ್ಚ್ ತಿಂಗಳಲ್ಲಿ P U C ಪರೀಕ್ಷೆಯ ಮೇಲ್ವಿಚಾರಕ (invigilator)ನಾಗಿ ಕೆಲಸಮಾಡಲು ಅವಕಾಶ ಸಿಕ್ಕಿತ್ತು. ನಮ್ಮ ಶಾಲೆಯಲ್ಲಿ ನಾನೇ/ನಾವೇ ಪಾಠ ಮಾಡಿದ ಮಕ್ಕಳಿಗೆ ಪರೀಕ್ಷೆಗಳು ಮಾಡುತ್ತಿದ್ದೆವಾದರೂ ಬೇರೆ ಶಾಲೆ, ಕಾಲೇಜು ಮಕ್ಕಳಿಗೆ ಪರೀಕ್ಷೆಗಳು ನೀಡಿ ಅವರನ್ನು ಅವಲೋಕಿಸುವ ಅವಕಾಶ ಸಿಕ್ಕಿರಲಿಲ್ಲ. ಪರೀಕ್ಷಾ ಕರ್ತವ್ಯದ ಆದೇಶ ಬಂದಿತ್ತು. ನಾಳೆ ಪೂರ್ವಭಾವಿ ಸಭೆಗೆ ಹೋಗುವ ಬಗ್ಗೆ ಹಿರಿಯ ಸಹೋದ್ಯೋಗಿಯ ಜೊತೆ ವಿಷಯ ಹಂಚಿಕೊಂಡೆ.ಅದಕ್ಕೆ ಸ್ಪಂದಿಸಿದ ಅವರು " ಅಯ್ಯಯ್ಯಪ್ಪಾ...! PUC EXAM ಡ್ಯೂಟಿನಾ??? ಸಾರ್ ಬಾರಿ ಕಾಫಿ ಚೀಟಿ ಹೊಡಿತಾರೆ ಇಲ್ಲೇ ಹುಡುಗರು... ಬಾರಿ ಡೇಂಜರ್ ನನ್ಮಕ್ಕಳು...ಹಂಗ್ -ಹಿಂಗ್ ಮಾಡಿ ಮತ್ತೆ ನಿಮಗೆ ಯಡವಟ್ಟು ತಂದಿಟ್ಟಾರು. ಪೂರ್ವಸಿದ್ಧತಾ ಸಭೆಗೆ ಹೋಗಬ್ಯಾಡ್ರಿ ಆಗ ಅವರು ನಿಮ್ಮನ್ನ exam duty ಇಂದ ಕೈಬಿಡ್ತಾರೆ ನೋಡ್ರಿ"ಅಂದರು.....ನೋಡೋಣ ಸಾರ್... ಎಂದಷ್ಟೇ ಹೇಳಿ ಪೂರ್ವಸಿದ್ಧತಾ ಸಭೆಗೆ ಹಾಜರಾಗಿ ಎಂಟು-ಹತ್ತು ದಿನಗಳ ಕರ್ತವ್ಯವನ್ನು ಒಪ್ಪಿಕೊಂಡು ಬಂದೆ...*
*ಮೊದಲದಿನದ exam ಡ್ಯೂಟಿಯದಿನ. ನಿಗದಿತ ವೇಳೆಗಿಂತ ಮುಂಚಿತವಾಗಿ ಹೋಗಿ ತಲುಪಿದ ನಾನು ಕೆಲವೇ ಮಕ್ಕಳು ಪೋಷಕರ ಜೊತೆಗೆ, ಕೆಲವು ಬೆರಳೆಣಿಕೆಯಷ್ಟು ಜನ ತಮ್ಮ hall ticket ನಂಬರ್ ಮತ್ತು ರೂಂ ನಂಬರನ್ನು ನೋಟಿಸ್ ಬೋರ್ಡ್ ಲ್ಲಿ ನೋಡಿಕೊಳ್ಳುತ್ತಿದ್ದರು. ಶೇಕಡಾ ೯೯% ರಷ್ಟು ವಿದ್ಯಾರ್ಥಿಗಳು ಸ್ವತಂತ್ರವಾಗಿ ನೊಂದಣಿ ನೋಂದಣಿ ಸಂಖ್ಯೆ ಹಾಗೂ ಕೊಠಡಿ ಸಂಖ್ಯೆಗಳನ್ನು ನೋಡಿಕೊಳ್ಳುತ್ತಿದ್ದರು.ಅವರಿಗೆಲ್ಲಾ ಯಾರ ಮಾರ್ಗದರ್ಶನವೂ ಅವಶ್ಯಕತೆ ಇಲ್ಲ ಎನಿಸಿತು. ಉತ್ತರ ಪತ್ರಕೆಗಳ ಬಂಡಲ್ ಹಿಡಿದು ಪರೀಕ್ಷಾಕೊಠಡಿಯ ಒಳಗೆ ಹೋದ ನಾನು ಎಲ್ಲಾ ಮಕ್ಕಳು ಆತುರ ಆತಂಕದಿಂದ ಬಂದಿರುವರೆಂದು ನಿಧಾನವಾಗಿ ಎಲ್ಲರ ನಂಬರ್ ಪರಿಶೀಲಿಸಿ ,ಗುರುತು ಪರಿಚಯವನ್ನು ನೋಡಿದೆ. ಯಾರೂ ಅಂತಹ ಅದಲು ಬದಲಾಗಿರುವ ಸ್ಥಳದಲ್ಲಿ ಕೂರದೇ ಅವರವರ ಸ್ಥಳದಲ್ಲಿ ಎಲ್ಲರೂ ಸರಿಯಾಗಿಯೇ ಕುಳಿತ್ತಿದ್ದರು.. ಅಂದಿನ ವಿಷಯದ ಪರೀಕ್ಷೆ ಆರಂಭವಾಯಿತು. ಏನಾಶ್ಚರ್ಯ...?? ಕನ್ನಡ /ಪ್ರಥಮ ಭಾಷೆಯನ್ನು 50-60 ನಿಮಿಷಗಳಲ್ಲಿ ಮುಕ್ಕಾಲು ಭಾಗ ಮಕ್ಕಳು ಪರೀಕ್ಷೆ ಬರೆದು ಮುಗಿಸಿದ್ದರು.! ಹೆಚ್ಚುವರಿ ಪುಟಗಳು ತೆಗೆದುಕೊಂಡು ಬರೆಯುವ ಸಾಧ್ಯತೆ ಇರಬಹುದೇನೋ ಎಂದು ಊಹಿಸಿದ್ದ ನನಗೆ ಬಹುತೇಕರು ೫-೬ ಪುಟಕ್ಕೆ ಸುಸ್ತಾಗಿದ್ದರು. ಕೆಲವರು ಹೆಚ್ಚೆಂದರೇ ೧೨-೧೪ ಪುಟಗಳು ಹೆಚ್ಚೆಚ್ಚಾಗಿತ್ತು. ಅಕ್ಕ-ಪಕ್ಕ, ಹಿಂದೆ -ಮುಂದೆ ,ಮೇಲೆ -ಕೆಳಗೆ ನೋಡುತ್ತಾ ಕುಳಿತಿದ್ದರು. ಏನಾದರೂ ಬರಿಯಿರೋ... ಒಮ್ಮೆ ಚೆಕ್ ಮಾಡಿ...ಎಂದೇಳಿದರೆ ತಮ್ಮ ತಲೆಯಲ್ಲಿ ಪ್ರಶ್ನೆಗೆ ಉತ್ತರ ಮಾತ್ರವಲ್ಲ ...ಬರೆಯಲು ಯಾವ ಅಕ್ಷರವೂ ಇಲ್ಲದೇ ಅವರ ತಲೆಯಲ್ಲಿ ಶೂನ್ಯವೇ ತುಂಬಿದೆಯೇನೋ ಎಂಬಂತಹ ಅವರ ಮುಖ ಭಾವ...! ನಾವೆಲ್ಲಾ ಪರೀಕ್ಷೆಗಳು ಬರೆಯುತ್ತಿದ್ದ ಕಾಲದಲ್ಲಿ ಕೊಟ್ಟಿರುವ ಸಮಯ ಏನಕ್ಕೂ ಸಾಲದೇ ನೀರು ಕುಡಿಯುವುದು ಮರೆತು ಬರೆಯತೊಡುಗುತ್ತಿದ್ದೆವು. ಪರೀಕ್ಷೆ ಮುಗಿದ ಮೇಲೆಯೇ ನಮ್ಮದು ಇತರ ಕೆಲಸಗಳು...! ಈಗಿನ ಮಕ್ಕಳು ಸಮಯ ಇದ್ದರೂ ಬರೆಯದೇ ಸುಮ್ಮನೆ ಕುಳಿತುಕೊಂಡಿದ್ದು ಆಶ್ಚರ್ಯಕರವಾಗಿ ಅನಿಸಿತು.ಇವೆಲ್ಲಾಕ್ಕಿಂತಲೂ ಅಚ್ಚರಿ ಎಂದೆನಿಸಿದ್ದು ಮಕ್ಕಳು ಬರೆಯುವ ಮತ್ತು ಉತ್ತರಿಸುವ ಸಾಮರ್ಥ್ಯ.. ಕನ್ನಡ ಭಾಷೆಯಲ್ಲಿ ಇವರು ಬರೊಬ್ಬರಿ ೧೨ ವರ್ಷಗಳು ಓದಿದ ನಂತರವೂ ಅವರು ಸಂಪಾದಿಸಿದ ಶಬ್ಧಸಂಗ್ರಹ,ಉತ್ತರ ಸಂಗ್ರಹದ ಒಟ್ಟು ಮೌಲ್ಯವೇ ೪-೫ ಪುಟ! ಅದೂ ಎರಡ್ಮೂರು ಪುಟಗಳಷ್ಟು ಪೂರ್ಣ ಪ್ರಶ್ನೆಗಳನ್ನೂ ಸೇರಿ !!ಹುಟ್ಟಿದಾಗಿನಿಂದ ಮಾತೃಭಾಷೆ ಮಾತಾಡಿ,ಅದರಲ್ಲೇ ಕಲಿತು,ಓದಿ ಬರೆದು,ನಿತ್ಯ ವ್ಯವಹಾರ,ಟಿವಿ ಮೊಬೈಲ್, ವಾಟ್ಸಾಪ್,ಪೇಸ್ ಬುಕ್..ರೀಲ್ಸ್, ಇನ್ಸ್ಟಾಗ್ರಾಂ ,ಟೆಲಿಗ್ರಾಂ, ದಿನಾಲೂ ಸಿನೆಮಾ,ಧಾರವಾಹಿ ಎಲ್ಲವೂ ನೋಡಿದ ಮೇಲೂ ತಲೆಯಲ್ಲಿ ಉಳಿದದ್ದೂ ಮಾತ್ರ ಇಷ್ಟೇನಾ ???ಎಂಬುದು ನನಗೆ ಕಾಡಿದ ಯಕ್ಷ ಪ್ರಶ್ನೆ..*
*ಉತ್ತರದ ಗುಣಮಟ್ಟವಾದರೂ ಸುಧಾರಿಸಿದೆಯಾ??? ಅದೋ ಅದೋಗತಿ...ಪರಮ ದುಸ್ಥಿತಿ!! ಒತ್ತಕ್ಷರ,ಕಾಗುಣಿತದಲ್ಲಿ ಅಗಣಿತ ದೋಷಗಳು...!ಅವು ಈ ಜನ್ಮಕ್ಕೆ ಸುಧಾರಿಸಲಾಗದ ತಪ್ಪುಗಳೇ ಇರಬೇಕು.ಹಾಗೆ ಕೋಣೆಯಲ್ಲಿ ಓಡಾಡುತ್ತಿರುವಾಗ ಒಬ್ಬ ವಿದ್ಯಾರ್ಥಿನಿ ಸಮಾಜ ಸುಧಾರಕರ ಬಗ್ಗೆ ಬರೆದ ಉತ್ತರ ಬಹಳ ಸ್ವಾರಸ್ಯಕರವಾಗಿತ್ತು.ಬುದ್ಧ ಬಸವರು ಸಮಾಜ ಸುಧಾರಣೆಯನ್ನು ಮಾಡಿದ್ದಾರೆ. ಅದೇನೆಂದರೇ ಅವರು " ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಮದುವೆ ಆಗಲೇಬೇಕು... ಎಲ್ಲರಿಗೂ ಆಗೇ ಆಗತ್ತೆ... ಆದರೆ ಮದುವೆ ಆಗಲು ಹದಿನೆಂಟು ವರ್ಷತುಂಬಬೇಕು...ಹಾಗಂತ ಬುದ್ಧ-ಬಸವ-ಗಾಂಧೀ ಹೇಳಿದ್ದಾರಂತೆ. ಸಮಾಜ ವಿಜ್ಞಾನದ ಎಲ್ಲಾ ಪ್ರಶ್ನೆಗಳಿಗೂ ಇದೇ ಉತ್ತರ. ತಲೆಕಟ್ಟು,ಕಾಗುಣಿತ,ಒತ್ತಕ್ಷರ ಇಲ್ಲದ ಸಾದಾ ಬರವಣಿಗೆ... ಪ್ರಶ್ನೆಗೂ ಉತ್ತರಕ್ಕೂ ಸಂಬಂಧವಿಲ್ಲ..ಅಯ್ಯೋ ಅದೆಷ್ಟೋ ಅಸಂಗತ ಉತ್ತರಗಳು?! ಈತರಹದ ವಿದ್ಯಾರ್ಥಿಗಳು ಒಂದು ಕಡೆಯಾದರೆ ಕಾಪಿ ಚೀಟಿಗಳು ಇಟ್ಕೊಂಡು ಬಂದು ಉತ್ತರ ಬರೆಯಲು ಪ್ರಯತ್ನಿಸುತ್ತಿದ್ದ ಮತ್ತೊಂದು ಪಡೆಯ ನಡೆ ತುಂಬಾ ಅಪಾಯಕಾರಿ...ದುರ್ಬೀನು ಹಾಕಿ ನೋಡಿದರೂ ಕಾಣದ size ನಲ್ಲಿ ಮೈಕ್ರೋ ಜೆರಾಕ್ಸ್ ಪೇಪರ್ಗಳನ್ನು ಎಲ್ಲೆಲ್ಲೂ ಇಟ್ಟುಕೊಂಡು ಬಂದು ಬರೆಯುವವರೂ ಇದ್ದರು... ಅದ್ಹೇಗೆ ಅವರ ಕಣ್ಣಿಗೆ ಆ ಅಕ್ಷರಗಳು ಕಾಣುವವೋ ಅವುಗಳನ್ನು ಹೇಗೆ ಕಾಪಿ ಮಾಡುವರೋ ಅವರೇ ಬಲ್ಲರು.. ನಾನಿದ್ದ ಕೋಣೆಯಲ್ಲಂತೂ ಅನುಮಾನ ಬಂದವರನ್ನು ತಕ್ಷಣ ಎಲ್ಲಾ ಜೇಬು, ಇಟ್ಟುಕೊಳ್ಳಬಹುದಾದ ಸ್ಥಳಗಳಲ್ಲಿ ಪರಿಶೀಲನೆ ಮಾಡುತ್ತಿದ್ದೆ. ಒಂದಷ್ಟು ಚೀಟಿಗಳು ಸಿಕ್ಕವಾದರೂ ಯಾರೊಬ್ಬರೂ ನೋಡಿ ಬರೆಯಲು ಅವಕಾಶ ಕೊಡಲಿಲ್ಲ. ಯಾರೊಬ್ಬರನ್ನೂ ಅತ್ತಿತ್ತ ನೋಡುವುದು,ಹಿಂದೆ ಮುಂದೆ ನೋಡಿ ಬರೆಯುವುದಕ್ಕೂ ನನ್ನ ತೀವ್ರ ಆಕ್ಷೇಪಣೆ ಇದ್ದುದರಿಂದ ಬಹುಶಃ ಅವರ ಆಟ ನಡೆಯಲಿಲ್ಲ ಅನ್ಸತ್ತೆ...ಪರೀಕ್ಷಾ ಸಮಯ ಮುಗಿಯುವವರೆಗೆ exam hall ಲ್ಲಿ ಕುಳಿತುಕೊಳ್ಳುವುದೇ ಅವರಿಗೆ ಕಷ್ಟಕರವೆನಿಸಿತ್ತು..ಇನ್ನೂ ಅವರ ಡ್ರೆಸ್,ಕಟಿಂಗ್ ಸ್ಟೈಲ್ ಅವೆಲ್ಲವೂ ಚಿತ್ರ ವಿಚಿತ್ರವೇ ಸರಿ...ಇದು ಒಂದು ಖಾಸಗೀ ಮತ್ತೊಂದು ಸರ್ಕಾರಿ ಪದವಿಪೂರ್ವ ಕಾಲೇಜು ಮಕ್ಕಳ ಚಿತ್ರಣ...ಮೇಲ್ವೀಚಾರಕಾರಗಿ ಬಂದ ಹತ್ತಾರು ಜನ ಸ್ನೇಹಿತರು, ಸಹೋದ್ಯೋಗಿಗಳನ್ನು ಈ ಬಗ್ಗೆ ಕೇಳಿದರೆ ಅವರದ್ದೂ ಅವರ ಅನುಭವವೂ ಮಕ್ಕಳ ಕಲಿಕೆ,ಬರವಣಿಗೆಯ ಬಗ್ಗೆ ಸಂಪೂರ್ಣ ಅಸಂತೃಪ್ತ ಭಾವ....!*
*_ಹಾಗಾದರೆ ಈ ಮಕ್ಕಳ ಇಂದಿನ ಪರಿಸ್ಥಿತಿಗೆ ಹೊಣೆ ಯಾರು???_*
*ನಮ್ಮ ಇಲಾಖೆಯ ಶಿಕ್ಷಣ ಅಧಿಕಾರಿಯೊಬ್ಬರು ಮುಖ್ಯಗುರುಗಳ ಸಭೆಯೊಂದರಲ್ಲಿ ನಮ್ಮ ತಾಲ್ಲೂಕಿನ ಫಲಿತಾಂಶ ಕಡಿಮೆಯಾದ ಕಾರಣ ಪೇಚಾಡುತಿದ್ದರು...web telecasting ಇದೆ ಎಂದು ಯಾವುದೋ ಜಿಲ್ಲೆಯಲ್ಲಿ ಒಬ್ಬರು ಶಿಕ್ಷಕರು ಸಸ್ಪೆಂಡ್ ಆದ ಎಂಬ ಕಾರಣಕ್ಕೆ ಎಲ್ಲರೂ ಕಾಪಿ ಹೊಡೆಸದೇ ಸುಮ್ಮನಾದ್ರಿ... ಬರೀ 10 ಮಾರ್ಕ್ಸ್ ಗೆ ಹೇಳಿಕೊಟ್ಟಿದ್ದರೂ ನಮ್ಮ ತಾಲ್ಲೂಕಿನ ಫಲಿತಾಂಶ 10% ಜಾಸ್ತಿ ಆಗುತ್ತಿತ್ತು.ಈ ಸರಿ exam duty ಮಾಡಿದವರೆಲ್ಲರೂ ಸತ್ಯ ಹರಿಶ್ಚಂದ್ರನ ತುಂಡುಗಳು ಎಂದೆಲ್ಲಾ ಹೇಳುತ್ತಿದ್ದರು...ಒಬ್ಬ ಶಿಕ್ಷಣಾಧಿಕಾರಿಗಳಾದವರಿಗೆ ತಾಲ್ಲೂಕಿನ percentage ಬೇಕು... ಆದರೆ ಮಕ್ಕಳ ಕಲಿಕೆ ಅಲ್ಲ...ಅಬ್ಬಾಬ್ಬ... ಎಂಥಾ ವಿಪರ್ಯಾಸ ಅಲ್ಲವೇ..???!!! ಒಬ್ಬ ಅಧಿಕಾರಿಗಳ ತಲೆಯಲ್ಲಿ ಇಂಥಾ ಯೋಚನೆಗಳು ಇದ್ದಾವೆ.. ಇನ್ನೂ ಈಗೀನ ವಿದ್ಯಾರ್ಥಿಗಳಿಗೆ 90 ರ ದಶಕದಲ್ಲಿದ್ದ ಕನಿಷ್ಟ ಜವಾಬ್ದಾರಿ, ನಯ ವಿನಯವೂ ಇಲ್ಲ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ಸಾಮಾನ್ಯ ಸಂಗತಿಯೇ. ಆದರೆ ಈ ಶಿಸ್ತು ಮತ್ತು ಜವಾಬ್ದಾರಿಗಳ ಕೊಂಡಿಗಳು ಮಕ್ಕಳಿಗೆ ತಪ್ಪಿದ್ದಾದರೂ ಎಲ್ಲಿ ಎಂಬುದು ಅರ್ಥವಾಗದ ಸಂಗತಿ.ಅದರಲ್ಲಿಯೂ ಕರೋನೋತ್ತರವಾಗಿಯಂತೂ ಕೇಳಬಾರದು ಹೇಳಬಾರದು..! ಇದು ಮಕ್ಕಳು ಮತ್ತು ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಾರಕವೇ ಸರಿ..*
*ಮಕ್ಕಳನ್ನು ಪೋಷಿಸುವಲ್ಲಿ ಪೋಷಕರು ಎಡವುತ್ತಿದ್ದಾರೆಯೇ?? ಅಥವಾ ಮಕ್ಕಳಿಗೆ ಪಾಠ ಮಾಡುತ್ತಿರುವ ಶಿಕ್ಷಕರೇ ತಪ್ಪು ಮಾಡುತ್ತಿದ್ದಾರೆಯೇ??? ಇವೆರಡೂ ಅಲ್ಲದೇ ಇಡೀ ವ್ಯವಸ್ಥೆಯೇ ಮಕ್ಕಳನ್ನು ಈ ಪರಿಸ್ಥಿತಿಗೆ ತಂದಿದೆಯೇ???*
*ಕಳೆದ ವರ್ಷ ನಮ್ಮ ಶಾಲೆಯ ಅತಿಥಿ ಶಿಕ್ಷಕನೊರ್ವ ಒಂದನೇ ಸಂಕಲನಾತ್ಮಕ ಪರೀಕ್ಷೆಯ ಪ್ರಶ್ನೆಗಳನ್ನು ಮುಂಚಿತವಾಗಿ ಮಕ್ಕಳಿಗೆ ನೀಡಿದ್ದರು. ಆ ಶಿಕ್ಷಕನನ್ನು ಈ ಬಗ್ಗೆ ವಿಚಾರಿಸಲಾಗಿ ಆ ಶಿಕ್ಷಕನ ಪ್ರಕಾರ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಮಕ್ಕಳಿಗೆ ನೀಡಿದ್ದು ತಪ್ಪೇ ಅಲ್ಲ.. ಅದು ಸಂಪೂರ್ಣ ಸಕ್ರಮ! ಯಾಕೆಂದರೆ ಈ ಅತಿಥಿ ಶಿಕ್ಷಕನೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾದಗಿನಿಂದ ಶಿಕ್ಷಕನಾಗಿ ಬರುವವರೆಗೂ ಅವನ ಗುರುಗಳು ಮಾಡಿದ್ದನ್ನೇ ಈಗ ಇವರು ಶಿಕ್ಷಕನಾದ ಮೇಲೆಯೂ ಅದನ್ನು ಮುಂದುವೆರೆಸುತ್ತಿದ್ದಾನೆ ಅಷ್ಟೆ.!! ಅವರ ಈ ಮಾತಿನಿಂದ ನನಗೆ ಅರ್ಥವಾಗಿದ್ದು ಕನಿಷ್ಟಪಕ್ಷ ಎರಡುದಶಕಗಳಿಂದ ನಮ್ಮ ವ್ಯವಸ್ಥೆಯು ಸಂಪೂರ್ಣ ದಿಕ್ಕುತಪ್ಪಲೂ ಬಹಳ ವ್ಯಾಪಕವಾಗಿ ಈತರಹದ ವ್ಯವಸ್ಥೆಗಳುನಮ್ಮ ಮಕ್ಕಳ ಇಂದಿನ ಪರಿಸ್ಥಿತಿಗೆ ಕಾರಣವೆಂಬುದಂತೂ ಸತ್ಯ..*
*ಶಿಕ್ಷಕನಾಗಿ ಆ ಮಕ್ಕಳ ಈ ದಯಾನೀಯ ಪರಿಸ್ಥಿತಿಗೆ ಇಡೀ ವ್ಯವಸ್ತೆಯೇ ಹೊಣೆ.ಅದರಲ್ಲಿ ಪೋಷಕರು ,ಶಿಕ್ಷಕರು, ಮೇಲಾಧಿಕಾರಿಗಳು,ಜನಪ್ರತಿನಿಧಿಗಳೂ ಸೇರಿ...*
*ಪ್ರಾಥಮಿಕ ಶಾಲೆಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಮುಂಚಿತವಾಗಿ ಸಂಭಾವ್ಯ ಪ್ರಶ್ನಾ ರೂಪದಲ್ಲಿ ಕೊಡುವ ಪ್ರಶ್ನೆಗಳು ಮಕ್ಕಳನ್ನು ಸಂಕುಚಿತಗೊಳಿಸಿವೆ. ಇನ್ನೂ ಕೆಲವು ಶಾಲೆಗಳಲ್ಲಿ ಘಟಕ ಪರೀಕ್ಷೆಗಳಿಗೂ ಉತ್ತರಗಳನ್ನು ಬರೆಸುತ್ತಿದ್ದಾರೆ ಈ ಒಂದು ಕ್ರಮ ಮಕ್ಕಳು ಸ್ವತಂತ್ರವಾಗಿ ಓದುವ,ಮತ್ತು ಅವರು ಓದಲೇಬೇಕೆನ್ನುವ ಅನಿವಾರ್ಯತೆಯನ್ನು ಸಂಪೂರ್ಣವಾಗಿ ನಶಿಸಿ ಹಾಕಿದೆ.ಹಾಗೋ ಹೀಗೋ ಕೆಲವು ಶಿಕ್ಷಕರ ಶಿಸ್ತಿನಿಂದ ಮೇಲೆ ಹೇಳಿದಂತೆ ಮಾಡಿಲ್ಲದಿದ್ದರೂ ಎಸ್ ಎಸ್ ಎಲ್ ಸಿ ಪರೀಕ್ಷಾ ಅವಧಿಯಲ್ಲಿ ಅವರವರ ವಯಕ್ತಿಕ ಜವಾಬ್ದಾರಿ, ಮತ್ತು ಅಧಿಕಾರಿಗಳ ತಾಲ್ಲೂಕು ಜಿಲ್ಲಾ ಪ್ರತಿಷ್ಠೆಯ ಕಾರಣ ಸಾಮೂಹಿಕವಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಬಹುತೇಕ ನಕಲು ಮಾಡಿಸುತ್ತಿದ್ದಾರೆ. ಸಿಸಿಟಿವಿ ಕಣ್ಗಾವಲಿನ 'ಅಡಿ'ಯಲ್ಲೇ ಇದೆಲ್ಲಾವೂ ಆಗುತ್ತಿದೆ. ಇದನ್ನು ತಿಳಿಯದವರು ಯಾರೂ ಇಲ್ಲ... ಹಾಗಂತ 100%ಪ್ರಾಮಾಣಿಕವಾಗಿ ಪರೀಕ್ಷೆಗಳು ನಡೆಸಿ ಫಲಿತಾಂಶಕೊಡುವ ಧೈರ್ಯ ಬಹುತೇಕ ಯಾವ ತಾಲ್ಲೂಕು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಇಲ್ಲವೇನೋ....???*
*ಎಸ್ ಎಸ್ ಎಲ್ ಸಿ ಮುಗಿಸುವ ಹೊತ್ತಿಗೆ ವಿದ್ಯಾರ್ಥಿಗಳಿಗೆ ನಾವ್ಯಾಕೆ ಓದಬೇಕು?? ಎಷ್ಟು ಓದಬೇಕು?? ಎನ್ನುವುದರ ಬಗ್ಗೆಯೂ,ವ್ಯವಸ್ಥೆಯ ಬಗ್ಗೆಯೂ ಸಂಪೂರ್ಣವಾಗಿ ಅರಿವಾಗಿ ಮಕ್ಕಳು ಓದಲೇ ಬೇಕಾದ,ಕಲಿಯಲೇಬೇಕಾದ ಅನಿವಾರ್ಯತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ.ಇನ್ನೂ ಅವರಿಗೆ ಗುರಿ ಉದ್ದೇಶಗಳಂತೂ ಇಲ್ಲವೇ ಇಲ್ಲ ಎನ್ನಬಹುದು.ಶಿಕ್ಷಕರು ಪೋಷಕರು,ಇಲಾಖೆಯ ಆಧಿಕಾರಿಗಳು ಅವರವರ ನೈಜ ಜವಾಬ್ದಾರಿ ಕೆಲವರು ಮರೆತಿದ್ದಾರೆ. ಅದೆಲ್ಲದರ ಫಲವೇ ಈ ಚಿತ್ರಣ.*
*ಉತ್ತರ ಕರ್ನಾಟಕ ದ ಕೆಲ ಜಿಲ್ಲೆಗಳಲ್ಲಿ ಮಕ್ಕಳು ಕಾಪಿ ಚೀಟಿಗಳನ್ನು ಮೆದೆ ಗಟ್ಟಲೇ ತರುತ್ತಾರೆಂದು ಪರೀಕ್ಷಾ chief ಒಬ್ಬರು ಮಾತಾಡುತ್ತಾ ಹೇಳುತಿದ್ದರು. ಇನ್ನೂ ಬಿಹಾರದಂತಹ ರಾಜ್ಯಗಳಲ್ಲಿ ಮಾರಕ ಅಸ್ತ್ರಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಮೇಲ್ವಿಚಾರಕ ರನ್ನು ಹೆದರಿಸಿ ತಮ್ಮಿಷ್ಟದಂತೆ ಪರೀಕ್ಷೆಗಳು ಬರೆಯುವ ವಿಧಾನಗಳು ಎಷ್ಟೊಂದು ಮಾರಕ ಅಲ್ಲವೇ???*
*ಮಕ್ಕಳಿಗೆ ಅನ್ವಯಿಕ ಶಿಕ್ಷಣ ಕೊಡಬೇಕು ,ಶಿಕ್ಷಣ ಪಡೆದವರು ಎಂಥಹ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂಬ ಹೇಳಿಕೆ ವಾಸ್ತವವಾಗಿ ನಿರರ್ಥಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು,ಪೋಷಕರು ಸರ್ಕಾರ ಎಚ್ಚರಗೊಳ್ಳಬೇಕು,ಪೋಷಕರು ಜವಾಬ್ದಾರಿ ಯಿಂದ ಮಕ್ಕಳನ್ನು ಬೆಳೆಸಬೇಕು,ಇನ್ನೂ ಅಧಿಕಾರಿಗಳು ನನ್ನ ಶಾಲೆ,ನನ್ನ ತಾಲ್ಲೂಕು, ನನ್ನ ಜಿಲ್ಲೆಯ ರಿಸಲ್ಟ್ ನನ್ನ ಸ್ಥಳವನ್ನು ನಿರ್ಧರಿಸುತ್ತದೆ ಎಂಬ ನಕಲಿ ಅಭಿಮಾನವನ್ನು ಬಿಟ್ಟು ಪ್ರಾಮಾಣಿಕ ಪರೀಕ್ಷೆ ನಡೆಸಲು ಅನುವು ಮಾಡಿಕೊಡಬೇಕು. ಪರೀಕ್ಷೆಗಳು ಪರೀಕ್ಷೆಗಳಂತೆಯೇ ನಡೆಯಬೇಕು.. ಪರೀಕ್ಷೆಗಳಲ್ಲಿ ಪಾಠ ಮಾಡಿದ ಶಿಕ್ಷಕರುಗಳೇ ನಕಲು ಮಾಡಿಸಿದರೆ ಆ ಶಿಕ್ಷಕನಿಂದ ಆ ವಿದ್ಯಾರ್ಥಿ ಗಂಭೀರವಾಗಿ ಎಂದಾದರೂ ಏನನ್ನಾದರೂ ಕಲಿಯಲು ಸಾಧ್ಯವೇ???ಈ ಅತಿಥಿ ಶಿಕ್ಷಕನೋರ್ವ ತಮ್ಮ ಗುರುಗಳನ್ನು ಅನುಕರಿಸಿದಂತೆ ಈಗಿನ ವ್ಯವಹಾರ ಜಗತ್ತಿನಲ್ಲಿರುವ ಪ್ರತಿ ಉತ್ಪನ್ನಗಳು,ಎಲ್ಲಾ ವೃತ್ತಿಗಳ,ಸಮಾಜದ ಎಲ್ಲಾ ವ್ಯಕ್ತಿಗತ ಪಾತ್ರಗಳು ನಕಲಿಯಾಗಿರುವಾಗ ಅಸಲಿಯಾದದ್ದು ಅಸಲಿಗಾದರೂ ಇರುವುದೋ ಇಲ್ಲವೋ ?...ಆಗ ಎಲ್ಲದೂ ನಕಲಿ... ಆಗ ಇಡೀ ಸಮಾಜದ ಪರಿಸ್ಥಿತಿ ಏನು ಆಗಬಹುದು..??*
*ಈ ಎಲ್ಲಾ ಪರಿಸ್ಥಿತಿ ಗಳು ಇಂದು ಶಿಕ್ಷಿತರ ನೈತಿಕ ಮೌಲ್ಯಗಳ ಪರಿಸ್ಥಿತಿ ಪ್ರತಿದಿನವೂ ನೋಡುತ್ತಲೇ ಇದ್ದೇವೆ... ಎಲ್ಲರೂ ಅವರವರ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗಲು ಅವಕಾಶ ಮತ್ತು* *ಅಗತ್ಯತೆಉಂಟುಮಾಡಬೇಕು...ಹೀಗಾದಾಗ ಮಾತ್ರ ಮುಂದಿನ ಎರಡು ದಶಕಗಳಲ್ಲಿ ಪುನರ್ನಿರ್ಮಾಣ ಮಾಡಬಹುದು .ಒಂದಷ್ಟು ಆದರೂ ಕನಿಷ್ಠ ಗುಣಮಟ್ಟವನ್ನು ಕಾಪಾಡಿಕೊಳ್ಳಬಹುದು.ಇನ್ನೂ ಓಪನ್ ಬುಕ್ ಎಕ್ಸಾಮ್ಸ್ ಜಾರಿಗೆ ತರುವ/ತಂದಿರುವ ಕ್ರಮಗಳು ಮಕ್ಕಳನ್ನು,ಸಮಾಜವನ್ನು ಅದೆಲ್ಲಿಗೆ ತಂದು ನಿಲ್ಲಿಸುತ್ತಾವೋ...??*
✍️ ನಾಗೇಂದ್ರ ಬಂಜಗೆರೆ
article no:-172
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ