ಬದುಕು ಬದಲಾವಣೆ...


#ಬದುಕು_ಬದಲಾವಣೆ..

(ಪ್ರಾಣಿ ಪಕ್ಷಿಗಳ ಜಾಡು ಹಿಡಿದು.. )

ಕಳೆದ ಏಳೆಂಟು ವರ್ಷಗಳ ಹಿಂದೆ ಹಳ್ಳಿಯೊಂದರಲ್ಲಿ ಬಾಡಿಗೆ ಮನೆಯಲ್ಲಿ ಇದ್ದೆ. ಆ ಬಾಡಿಗೆ ಮನೆಯ ಮಾಲೀಕನದು ಒಂದು ಎಮ್ಮೆ ಮೊಣಕ ಇತ್ತು. ಸಾಮಾನ್ಯವಾಗಿ ಮನೆಯಲ್ಲಿ ಮಿಕ್ಕ ಅನ್ನ, ತರಕಾರಿ, ಸೊಪ್ಪು ಸೋಸಿ ಉಳಿದ ಪದಾರ್ಥ,ಹಾಳಾದ ತರಕಾರಿಗಳು ಹೀಗೆ ಇವೆಲ್ಲವುಗಳನ್ನು ಸೇರಿ ಒಂದು ಮುಸುರೆ ಬಕೇಟ್ಗೆ ಹಾಕಿ ಅದನ್ನ ಮತ್ತೊಂದು ದೊಡ್ಡ ಮಾಸ್ಟರ್ ಮುಸುರೆ ಬಕೇಟಿಗೆ ಸುರಿಯುವುದು ವಾಡಿಕೆ ಇತ್ತು. ನಮಗೆ ಅದು ಮುಸುರೆ... ಅದೇ ಎಮ್ಮೆಗೆ ಮೃಷ್ಟನ್ನ ಭೋಜನ! ಪ್ರತಿದಿನ ಸಂಜೆ ಆ ಎಮ್ಮೆಗೆ  ರಸಕವಳದ ಸಮಯ. ಅಕ್ಕಪಕ್ಕದ ಆರೇಳು ಮನೆಯ ಮುಸುರೆ ಕುಡಿದು ತಿಂದು ತೇಗುತಿದ್ದ ಎಮ್ಮೆ ಮೊದಲು ಸಪೂರ ಸಣಕಲು ಇದ್ದ ಮೊಣಕ 5-6 ತಿಂಗಳು ಮುಸುರೆ ಕುಡಿದದ್ದರಿಂದಲೂ ಮತ್ತು ಮಳೆಗಾಲ ಆರಂಭ ಆದ್ದರಿಂದ ಎಮ್ಮೆಗೆ ಕೊಬ್ಬು ಜಾಸ್ತಿ ಆಗುತ್ತಾ 'ಕೊಬ್ಬಿದ ಮಹಿಷಿ'ಆಗಿ ಹೋಯಿತು.! ಹೀಗೆ ಒಂದು ದಿನ ಕೈಯಲ್ಲಿ ಶಾಲೆಯ ಬೀಗದ ಗೊಂಚಲು ಹಿಡಿದು  'ಝಲ್... ಝಲ್' ಎಂದು ಝಣಪಿಸುತ್ತಾ  ನಿಧಾನಕ್ಕೆ ಮನೆಗೆ ಬರುತ್ತಿದ್ದೆ. ನಾನು ಮನೆಯ ಗೇಟ್ ತೆಗೆಯಲು ಕೈ ಹಾಕಿದೆ. ಇನ್ನೇನು ಗೇಟ್ ತೆಗಿಯಬೇಕು ಇತ್ತ  ಕಾಂಪೌಂಡ್ ಒಳಗೆ  ನಮ್ಮ ಮನೆಯ ಮಾಲೀಕನ ಮಗಳು ಒಂದೆರಡು ಮೊಟ್ಟೆಯ ಶೆಲ್ ಗಳು ತೇಲುತಿದ್ದ ಒಂದು ಸಾಧಾರಣ ಬಕೆಟ್ ಮುಸುರೆಯನ್ನು ಇನ್ನೊಂದು ದೊಡ್ಡ ಮಾಸ್ಟರ್ ಮುಸುರೆ ಬಕೇಟಿಗೆ ಸುರಿಯುತಿದ್ದಳು. ಗೇಟು ತೆಗೆಯಲು ಕೈ ಹಾಕಿದ ನಾನು ಆ ಮೊಟ್ಟೆ ಶೆಲ್ ತೇಲುತಿದ್ದ ಮುಸುರೆ ಬಕೆಟ್ ನೋಡಿ "ರುದ್ರಮ್ಮ...ನಿಲ್ಸು..ನಿಲ್ಸು.. ಸುರಿಬೇಡ... ಸುರಿಬೇಡ..." ಮುಂದೆ ಹಾವೋ ಏನೋ ಇದೆಯೇನೋ ಎಂಬಂತೆ ಥಟ್ಟನೆ ನಿಂತ ರುದ್ರಮ್ಮ ಏನ್ಸ?? ಎಂದು ಗಾಬರಿಯಿಂದ ಕೇಳಿದಳು. "ಮುಸುರೆಯಲ್ಲಿ ಮೊಟ್ಟೆ ಸಿಪ್ಪೆ ಎಲ್ಲಾ ಇದೆ ಎಮ್ಮೆ ಮುಸುರೆ ಕುಡಿಯಲ್ಲ ನೋಡು..." ಎಂದು ಜೋರಾಗಿ ಕೂಗಿದೆ. ನಾನು ನಿಲ್ಸು, ನಿಲ್ಸು ಎಂದು ಕೂಗಿದ್ದಕ್ಕೆ ತಾತ್ಕಾಲಿಕವಾಗಿ ನಿಲ್ಲಿಸಿದ್ದ ರುದ್ರಮ್ಮ ನಾನು ವಿಷಯ ಹೇಳಿದ ಮೇಲೆ "ಏನಾಗಲ್ಲ ಸರ್... ನಮ್ ಎಮ್ಮೆ ಕುಡಿತಾತೆ... ಎಂದೇಳುತ್ತಾ ದಬಕ್ಕನೆ ಎಲ್ಲವನ್ನೂ ಸುರುವಿದಳು.ಸಾಮಾನ್ಯವಾಗಿ ಎಮ್ಮೆಗಳು ದನಗಳು ಕುರಿ-ಮೇಕೆಗಳು(ಸಸ್ಯಾಹಾರಿಗಳು) ನೀಚ ವಾಸನೆ ಬಂದರೆ ತಿನ್ನುವುದಿಲ್ಲ, ಕುಡಿಯುವುದಿಲ್ಲ... ಇವತ್ತು  ನಿನಗೆ ಈ ದೊಡ್ಡ ಮುಸುರೆ ಬಕೆಟ್ ಹೊತ್ತುಕೊಂಡು ಹೋಗಿ ತಿಪ್ಪೆಗೆ ಹಾಕಿ ಬರೋ ಕೆಲಸ ಆಗತ್ತೆ ಮಾಡು ಮಾಡು ಎಂದು ಹೇಳಿದೆ. 'ಹಾಗೆನಿಲ್ಲ ಸರ್ ಗ್ಯಾರಂಟಿ ಎಮ್ಮೆ ಮುಸುರೆ ನೀರನ್ನು ಕುಡಿತದೆ. ನನಗೆ Extra ಕೆಲಸ ಬೀಳದು' ಎಂದು ಹೇಳಿದಳು. ನದಿಯಲ್ಲಿ ಅಲೆಗಳ ರಬಸಕ್ಕೆ ದೋಣಿ ತೊಯ್ದಡುವಂತೆ ಮುಸುರೆ ನೀರಿನ ಮೇಲೆ ತೆಲಾಡುತಿದ್ದ ಆ ಮೊಟ್ಟೆಯ ಸಿಪ್ಪೆ ತೋರಿಸಿ ದನಗಳು ಎಮ್ಮೆಗಳು ಸ್ವಲ್ಪ ಮೊಟ್ಟೆ ವಾಸನೆ ಬಂದರೂ ಕುಡಿಯಲ್ಲ ನಾಲಕ್ಕು ಐದು ಮೊಟ್ಟೆ ಸಿಪ್ಪೆ ಹಾಕಿದ್ರೆ ಎಲ್ಲಿ ಕುಡಿತಾತೆ...?? ಕುಡಿಯಲ್ಲ ಎಂದು ಹೇಳಿ ನಾನು ಮೇಲೆ ಹೋದೆ. ಕೆಲವೇ ನಿಮಿಷದ ಬಳಿಕ ಎಮ್ಮೆಯನ್ನು ಕರೆತಂದ ರುದ್ರಮ್ಮ ಎಮ್ಮೆಗೆ ಮುಸುರೆ ನೀರು ಕುಡಿಸುತ್ತಿದ್ದಳು. ಸಸ್ಯಹಾರಿ ಪ್ರಾಣಿಗಳು ಮಾಂಸವನ್ನು, ಮಾಂಸಹಾರ ತಗುಲಿದ ನೀರನ್ನು, ಪದಾರ್ಥವನ್ನು ಮುಟ್ಟುವುದಿಲ್ಲ ಎಂಬ ನನ್ನ ನಂಬಿಕೆಗೆ ಆ ಪ್ರಸಂಗ ಭಂಗ ತಂದಿತ್ತು. ಆ ಎಮ್ಮೆಗೆ ಯಾವುದೇ ಕಿರಿ ಕಿರಿ ಇಲ್ಲದೇ  ಮುಸುರೆಯನೆಲ್ಲಾ ಕುಡಿದು ನೆಕ್ಕಿ ಸ್ವಚ್ಚ ಮಾಡಿತ್ತು. ಉರಿಯುವ ಬೇಸಿಗೆಕಾಲದಲ್ಲಿ 24 ಗಂಟೆ ನೀರಿಲ್ಲದಿದ್ದರೂ ಮೊಟ್ಟೆ- ಮಾಂಸ ಮಿಶ್ರಿತ ನೀರನ್ನು ಯಾವತ್ತೂ ಕುಡಿಯದಿದ್ದ ದನಗಳನ್ನು ನಾನು ನೋಡಿದ್ದೆ.  ಬರೀ ನೀಚ ವಾಸನೆ ಬಂತೆಂದರೆ ಅದೆಷ್ಟೇ ಇದ್ದರೂ, ಅದೇನೇ ಆಗಿದ್ದರೂ, ಅದೆಷ್ಟೋ ಅನಿವಾರ್ಯವಾಗಿದ್ದರೂ ಕೂಡ ಅದನ್ನು ಮುಟ್ಟದ ಶಾಕಾಹಾರಿ ಪಶುಗಳನ್ನು  ನಾನು ನೋಡಿದ್ದೇನೆ. ನೀವು ನೋಡಿಯೂ,ಕೇಳಿಯೂ ಇರುತ್ತೀರಿ. ಹಾಗೆ ಆ ಎಮ್ಮೆ ದಿನ ಕಳೆದಂತೆ  ಚಿಕನ್ ಸಾರು, ಮೀನು ಮುಳ್ಳುಗಳು ಈ ತರ ಏನು ಹಾಕಿದರೂ ತಿನ್ನುವಂತಾಗಿತ್ತು.ಆದರೆ  ಆ ಎಮ್ಮೆ ಆ ತರ ಮುಸುರೆ ನೀರು ಕುಡಿಯುವುದನ್ನು ನೋಡಿ ನನ್ನ ತಲೆಯಲ್ಲಿ ಹೊಸ ವಿಚಾರಗಳ ಹುಟ್ಟಿಗೆ ನಾಂದಿ ಆಗಿದ್ದು ಸುಳ್ಳಲ್ಲ...

  ಸಮಾಜಶಾಸ್ತ್ರದಲ್ಲಿ 'ಸಂಸ್ಕೃತಿಕರಣ ' ಎಂಬ ಪದ ನೀವು ಕೇಳಿರಬಹುದು. ಮೇಲ್ವರ್ಗದವರ ಆಹಾರ ಅಭ್ಯಾಸದಂತಹ  ಆಚಾರ ವಿಚಾರಗಳ ಆಚರಣೆಗಳನ್ನು ಧಮನಿತ/ಕೆಳ ವರ್ಗದವರು  ಆಚರಣೆಗೆ ತಂದು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವುದು ಆಗಿದೆ. ಈ ಭೂಮಿಯ ಮೇಲೆ ಸಾವಿರಾರು ವರ್ಷಗಳ ಕಾಲ ನಿರಂತರವಾಗಿ ರೂಢಿಸಿಕೊಂಡು ಬಂದಿದ್ದಂತಹ ಆಹಾರ ಪದ್ಧತಿಯನ್ನು, ಆಚಾರ ವಿಚಾರಗಳನ್ನು ಮೇಲ್ದರ್ಜ್ಗೆಗೆ ಏರಿಸಿಕೊಂಡ  ಜನ ತಾನು ಮೇಲೆನುತ ನೀನು ಕೀಳೇನುತಾ  ಈ ಭೂಮಿಯ ಮೇಲೆ ಅತ್ಯಂತ ಹೀನವಾಗಿ ವರ್ತಿಸುತ್ತಿದ್ದಾರೆ. ಪಶು -ಪಕ್ಷಿಗಳಲ್ಲೂ ಕೂಡ 'ಸಂಸ್ಕೃತಿಕರಣ'ದಂತೆ  ಬದುಕು ಬದಲಿಸಿ  ಜೀವನ ಅಭ್ಯಾಸಗಳಲ್ಲಿ ಮತ್ತೊಂದು ಮಜಲನ್ನು  ತಲುಪಿವೆ. ಸಾಮಾಜಿಕ ಮತ್ತು ಪ್ರಾಕೃತಿಕ ಬದಲಾವಣೆಯು ಸೃಷ್ಟಿಯ ಆಳದಲ್ಲಿ ಅಡಗಿದೆ.ಈ ಸಂಸ್ಕೃತಿಕರಣ ಮನುಷ್ಯರಲ್ಲಿ ರೂಢಿಯಾಗಿ ಈಗ ಆಚರಣೆಯಲ್ಲಿರುವಂತೆ ಇದೇ ತೆರನಾದ ಆಹಾರ ಅಭ್ಯಾಸಗಳಲ್ಲಿನ ಸಂಸ್ಕೃತಿಕರಣದಂತಹ ಬದಲಾವಣೆ ಇತ್ತೀಚಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳು ಮತ್ತು ಇತರ ಜಂತುಗಳಲ್ಲೂ  ಕೂಡ ನಾವು ನೋಡುತ್ತಿದ್ದೇವೆ.ಯಾವ ಯಾವುಗಳಲ್ಲಿ ಯಾವ ತೆರನಾದ ಬದಲಾವಣೆಗಳು ಆಗಿವೆ ಎಂಬುದನ್ನು ವಿಶ್ಲೇಷಣೆ ಮಾಡಿದರೆ ಈ ಕೆಳಗಿನ ಅಂಶಗಳನ್ನು ನಾವು ಕಾಣಬಹುದು.

 
ಕೋಳಿ ತುಪ್ಪಳ ತಿನ್ನುವ ಎಮ್ಮೆಗಳು :

 ವೇದ ಶಾಸ್ತ್ರಗಳಲ್ಲಿ ಹಸುವಿನ ಹಾಲು ಮಾತ್ರ ಸಶ್ರೇಷ್ಠವಾದದ್ದು ಎಂದು ಪ್ರತಿಪಾದಿಸಲಾಗಿದೆ.ಆದರೆ ಅಂದಿನ ದಿನಮಾನಗಳಲ್ಲಿ ಎಮ್ಮೆಗಳು ಬಹುಷಃ  ಹುಲ್ಲು ಸೊಪ್ಪು ಹೊರತುಪಡಿಸಿ ಇತರೆ ಜೈವಿಕ ಪದಾರ್ಥ ಏನಾದರೂ ತಿಂದಿರುವ ಕಾರಣ ಈ ತೆರನಾಗಿ ಹೇಳಿರಬಹುದು. ಆದರೆ ಎಮ್ಮೆಗಳು ನಗರದ ಚಿಕನ್ ಅಂಗಡಿಗಳಿಂದ ಎಸೆಯಲ್ಪಡುವ ಕೋಳಿ ತುಪ್ಪಳವನ್ನು ಬಹಳ ರುಚಿಯಾಗಿದೆಯೇನೋ ಎಂಬಷ್ಟರ ಮಟ್ಟಿಗೆ ಎಮ್ಮೆ ವಂಶವೆಲ್ಲಾ ಸೇರಿ  ಚಪ್ಪರಿಸಿ ತಿನ್ನುತ್ತಿರುವುದನ್ನು ನೂರಾರು ಬಾರೀ ಕಣ್ಣಾರೆ ಕಂಡಿದ್ದೇನೆ.ಈ ಪ್ರಾಣಿಗಳಲ್ಲಿನ ಸೋಮಾರಿತನ ಇವುಗಳನ್ನು  ಇಂತಹ ಸ್ಥಿತಿಗೆ ತಲುಪಿಸಿದ್ದರೆ ಮತ್ತೊಂದು ಕಡೇ  ದಶಮಾನಗಳ ಕಾಲ ನಾಗರಿಕರಣದ ಭರಾಟೆಯಲ್ಲಿ ಓಡಾಡಿಕೊಂಡಿದ್ದ ಈ ಎಮ್ಮೆಗಳು ಸ್ವಲ್ಪ ಸಲ್ಪವೇ ನಿತ್ಯ ರೂಡಿಸಿಕೊಂಡ ಇವು ವಂಶವಾಹಿನಿಗಳ ಮೂಲಕ ಅಂತದೊಂದು ಜನಟಿಕ್ factor ಈಗಾಗಲೇ ಬಂದಿರುವ ಮತ್ತು ಮುಂಬರುವ ಪ್ರಾಣಿಗಳಿಗೆ ಅಂಟಿಕೊಂಡಿದೆ. ಅದಕ್ಕೇ ಕೇವಲ ಸಸ್ಯಾಹಾರಿ ಎಂಬ ಗುಂಪಿನಲ್ಲಿ ಗುರುತಿಸಬಹುದಾಗಿದ್ದ  ಎಮ್ಮೆಗಳು ಮತ್ತು ಕಡಿಮೆ ಪ್ರಮಾಣದಲ್ಲಿ ಹಸುಗಳನ್ನು  'ಮಿಶ್ರಹಾರಿ'ಎಂದು ಹೇಳಬಹುದಾಗಿದೆ.

ಬೈಂಡಿಂಗ್ ವೈರ್ ಪಕ್ಷಿಗಳಿಗೆ ಗೂಡು ಕಟ್ಟುವ ಸರಕು ಆದಾಗ...

 ಬಹಳ ಹಿಂದಿನ ಕಾಲದಲ್ಲಿ ಹದ್ದು ಗಳು ಎತ್ತರದ ಮರದಲ್ಲಿ ನಿರ್ಜನ ಪ್ರದೇಶದಲ್ಲಿ ಗೂಡನ್ನು ಕಟ್ಟುತ್ತಿದ್ದವು. ಅದಕ್ಕಾಗಿ ಯಾವ್ಯಾವುದೋ ತೆರೆನಾದ ಒಣಗಿದ ಸಪಾಳವಾದ ಕಡ್ಡಿಗಳನ್ನ ತಂದು ಗೂಡು ಕಟ್ಟುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ನಗರೀಕರಣಗೊಂಡ ಹದ್ದುಗಳು ಕಳೆದೆರಡು ದಶಕಗಳಿಂದ ಮೊಬೈಲ್ ಟವರ್ ಗಳನ್ನು ತಮ್ಮ ಗೂಡು ಕಟ್ಟುವ ಸ್ಥಳವನ್ನಾಗಿಸಿಕೊಂಡಿವೆ. ಅದರಲ್ಲೂ ಗೂಡು ಕಟ್ಟಲು ಕಟ್ಟಡ ಕೆಲಸಕ್ಕೆ ಬಳಸುವ ಬೈಂಡಿಂಗ್ ವೈರ್ ಗಳು, ತುಂಡಾದ ತಂತಿಗಳು ಇತರೆ ಲೋಹದ ವಸ್ತುಗಳನ್ನ ಬಳಸುತ್ತಿರುವುದು ವಿಶೇಷ. ಈ ವೈರುಗಳ ಬಳಸುವ ಕೌಶಲ ಬೆಳವ, ಪಾರಿವಾಳ ಇನ್ನಿತರ ಪಕ್ಷಿಗಳಿಗೂ ಬಂದಿದೆ. ಈ ಪಕ್ಷಿಗಳು ಬದಲಾದ ಸ್ಥಿತಿ ಹೇಗಿದೆ ಎಂದರೆ ಹೀಗೊಂದು ಕಾಲದಲ್ಲಿ ಮನುಷ್ಯ ಗುಡಿಸಲುಗಳಲ್ಲಿ ಹುಲ್ಲು ಕಡ್ಡಿಗಳನ್ನ ಕಟ್ಟಿಕೊಂಡು ಬದುಕುತ್ತಿದ್ದ ಕಾಲ ಒಂದಿತ್ತು. ಆದರೆ ಪಕ್ಕಾ ಮನೆ ಯೋಚನೆ ಪಡೆದ ಮಾನವ ಆ ಕಟ್ಟಡಗಳಿಗೆ ಲೋಹದ ಟಚ್ ನೀಡಿ ಹುಲ್ಲು ಕಡ್ಡಿ ಗುಡಿಸಲುಗಳನ್ನು ತೊರೆದು ಆರ್ ಸಿ ಸಿ ಮನೆ ಮಾಡಿಕೊಂಡ ಹಾಗೆ ಇಂದಿನ ಪಕ್ಷಿಗಳು ಕಡ್ಡಿ ಕಸವನ್ನು ಬಿಟ್ಟು ಲೋಹದ ತಂತಿಗಳನ್ನ ಬಳಸಿ ಗೂಡು ಕಟ್ಟುತ್ತಿವೆ.ಜೊತೆಗೆ ಯತ್ತೇಚ್ಚೆವಾಗಿ ಪಾರಿವಾಳಗಳು ನಗರದ ದೊಡ್ಡ ದೊಡ್ಡ ಕಟ್ಟಡಗಳಲ್ಲಿಯೇ ಇಂದು ವಾಸ ಮಾಡುತ್ತಾ ಹಾರಾಡುತ್ತ ಹಿಕ್ಕೆ ಪಿಕ್ಕೆಗಳನ್ನು ಹಾಕಿ ಕಟ್ಟಡಗಳನ್ನು ಗಲೀಜು ಮಾಡುತ್ತಿರುವುದು ಇಂದಿನ ನಗರಗಳಲ್ಲಿ ಸಾಮಾನ್ಯವಾಗಿ  ನೀವು ಕಾಣಬಹುದು.

ಸಕ್ಕರೆ ತಿನ್ನುವ ಬುಲ್ ಬುಲ್ ಗಳು...

 ಕಾಡಿನಲ್ಲಿ ಸದಾ ಜೋಡಿಯಲ್ಲೇ ಕಾಣಿಸುತ್ತಾ ನಾನಾ ಜಾತಿಯ ಗ್ಲುಕೋಸ್ ಸಹಿತ ಗ್ಲುಕೋಸ್ ರಹಿತ ಹಣ್ಣುಗಳು ತಿಂದು ಬದುಕುತಿದ್ದ ಪಿಕಳಾರ (ಬುಲ್ ಬುಲ್)ಪಕ್ಷಿಗಳು ಮನುಷ್ಯ ತಯಾರಿತ ಸಕ್ಕರೆಯನ್ನು ಭಲೇ ಇಷ್ಟಪಟ್ಟು ಕುಕ್ಕಿ ಕುಕ್ಕಿ ತಿನ್ನುತ್ತಾವೆ.ಪ್ರಕ್ಟೋಸ್-ಗ್ಲುಕೋಸ್ ರುಚಿಯಲ್ಲಿ ಒಂದೇ ಆದರೂ ಅದರ ವಸ್ತುವಿನ ರೂಪ ಬೇರೆ ಬೇರೆ ಆಗಿರುತ್ತದೆ. ಆದರೆ ಆ ಪಿಕಲಾರಗಳು 'ಸಕ್ಕರೆಯು ಕೂಡ ತಿನ್ನುವಂತದ್ದೇ' ಎಂದು ಕಂಡುಕೊಂಡು ಅದನ್ನು ತಮ್ಮ ಮರಿಗಳಿಗೆ ತಿನ್ನಿಸುತ್ತಿರುವುದು ವಿಶೇಷ.

ಜೇಡರ ಬಲೆ :  ಜೇಡರ ಹುಳುವಿನ ಜೀವನನೇ ಬಲೆಯೊಳಗೆ. ನಿರ್ದಿಷ್ಟ ಅಳತೆಯೊಳಗೆ ಬಲೆಯ ನಿರ್ಮಿಸಿ ಬಲೆಯೊಳಗೆ ಬಂದು ಬೀಳುವ ಕೀಟಗಳನ್ನು ಬೇಟೆಯಾಡಿ ಬದುಕುವ ವಿಶೇಷ ಕೀಟ ಅರಣ್ಯ ಪ್ರದೇಶಕ್ಕಿಂತ ಅಧಿಕ ಪ್ರಮಾಣದಲ್ಲಿ ಮಾನವ ವಾಸಮನೆಗಳಲ್ಲಿ ಅಧಿಕ ಪ್ರಮಾಣದಲ್ಲಿ ವಾಸಿಸುತ್ತಿವೆ.ಸಾಲ ಇರುವವರ ಮನೆಗಳಲ್ಲಿ ಜೇಡರ ಬಲೆ ಕಟ್ಟುತ್ತಾವಂತೆ ಎಂದು ಹೇಳುತ್ತಾರೆ ಆದರೆ  ಕಿಟಕಿ ಬೆಳಕಿರುವ ಮನೆಗಳಲ್ಲಿ ಈ ಹುಳುಗಳು ಹೆಚ್ಚು ಇರುತ್ತವೆ ಎಂದು ಹೇಳಬಹುದು. ಕಾಡುಪ್ರದೇಶದಲ್ಲಿ ಬಲೆ ಹೆಣೆಯುವ ಜೇಡರ ಹುಳುಗಳಿಗಿಂತ ಮನೆಗಳಲ್ಲಿ ಗೂಡು ಕಟ್ಟಿರುವ ಹುಳುಗಳು ಹೆಚ್ಚು ಹುಳ ಹುಪ್ಪಟೆಗಳನ್ನು ಹಿಡಿದು ತಿನ್ನುತ್ತಾವೆ. ಕಾಡಲ್ಲಿ ಅಲ್ಲಲ್ಲಿ ಬಲೆ ಹೆಣೆದು ಆಹಾರ ಅರಸುತಿದ್ದ ಇವು ಈಗ ಬೆಳಕಿನ ಸುಪರ್ದಿಯಲ್ಲಿ ಬೇಟೆ ಯಾಡುತ್ತಿವೆ.


ಓವನ್ ಅಥವಾ ಅಂಬರ ಗುಬ್ಬಚ್ಚಿ  ಎಂಬ ಪಕ್ಷಿಯು ತಲಾ ತಲಾoತರ ಗಳಿಂದ ಕೆಸರು ಮಣ್ಣು ಮತ್ತು ಲಾಲಾರಸ ದಿಂದ ಯಾರಿಗೂ ನಿಲುಕದ ಬಂಡೆಗಲ್ಲುಗಳು ಎತ್ತರ ಕಟ್ಟಡಗಳು, ಓವರ್ ಟ್ಯಾಂಕ್ ಗಳ ಕೆಳಭಾಗದಲ್ಲಿ ಜೋಡಿ ಜೋಡಿಯಾಗಿ ಗೂಡು ಕಟ್ಟಿಕೊಳ್ಳುತ್ತಿದ್ದ ಪಕ್ಷಿಗಳು ಇಂದು ತಮ್ಮ ಜೀವನ ಶೈಲಿಯನ್ನು ಬಡಲಾಯಿಸಿಕೊಂಡಿವೆ. ಈ ಪಕ್ಷಿಗಳ ಗೂಡು ಪತ್ತೆಯಾದದ್ದು ಚಳ್ಳಕೆರೆ ತಾಲೂಕಿನ ತಳುಕು ಎಂಬ ಗ್ರಾಮದಲ್ಲಿ. ಖ್ಯಾತ ಕಾದಂಬರಿಕಾರರದಂತಹ  ತ ರಾ ಸು  ಅವರ ಸ್ಮರಣಾರ್ಥವಾಗಿ ಗೊಂಡಿರುವಂತಹ ಗ್ರಂಥಾಲಯ ಕಟ್ಟಡದಲ್ಲಿ. ಸಾಮಾನ್ಯವಾಗಿ ಮಣ್ಣಿನಿಂದ ಮಾಡಿದ ಗೂಡಿನಲ್ಲಿ ಒಳಗಡೆ ಮೊಟ್ಟೆಗೆ ಮರಿಗಳಿಗೆ ಮೆತ್ತಗಿರಲೆಂದು ಹತ್ತಿಯಂತಹ ಮೃಧುವಾದ ವಸ್ತು ಇಡುತ್ತವೆ. ಆದರೆ ಈ ಗೂಡಿನಲ್ಲಿ ಗೂಡಿನ ಹೊರಭಾಗದಲ್ಲಿ ಮಣ್ಣನ್ನೇ ಬಳಸದೆ ಕೋಳಿತುಪ್ಪಳದಂತಹ ವಸ್ತುಗಳಿಂದ ಬಹಳ ಅದ್ಭುತವಾಗಿ ಗೂಡು ನಿರ್ಮಾಣ ಮಾಡಿವೆ. ಯಾವ architech ಗೂ ಕಡಿಮೆ ಇಲ್ಲದ ಚಂದದ ಕಾಮಗಾರಿ ನೆಡೆಸಿವೆ. ವಿಶೇಷ ವೆಂದರೆ ತಳಕು ಬೆಂಗಾಡು... ವಾರ್ಷಿಕ 100-200 mm ಮಳೆ ಬೀಳಬಹುದಾದ ಸ್ಥಳ. ಆ ಪಕ್ಷಿಗಳಿಗೆ ಕೆಸರು ಸಿಗುವುದು ಕಷ್ಟ... ಆದರೂ ಜೋಡಿ ಸೇರಿ ಗೂಡು ಕಟ್ಟಿವೆ. ಅವುಗಳ ದುರದೃಷ್ಟವೋ ಏನೋ ಅಲ್ಲಿನ ಜವಾನಬೊಬ್ಬ ಮೇಲಧಿಕಾರಿಗಳು ಬಯ್ಯುವರೆಂದು ಕೆಡವಿದ್ದಂನಂತೆ. ಅವುಗಳೋ ತಮ್ಮದೇ ಕಾಮಗಾರಿಯ ವೈಫಲ್ಯ ಎಂದು ತಿಳಿದು ಇನ್ನೂ ಗಟ್ಟಿಯಾಗಿ ಮರುನಿರ್ಮಾಣ ಮಾಡಿವೆ. ಮಾಡುತ್ತಿವೆ. ಆ ಜವಾನನಿಗೂ ಹೇಳಿದ್ದೇನೆ ಕೇಡವಬೇಡ..ನಿಮ್ಮನ್ನು ಆ ವಿಚಾರವಾಗಿ ಬಯ್ಯುವವರ ಜೊತೆಗೆ ನಾನು ಮಾತಾಡುವೆ ಎಂದು...


ಸ್ವಾಲೋ ಹಕ್ಕಿಯ ಬದಲಾದ ಗೂಡು...

ಬದಲಾವಣೆ ಜಗದ ನಿಯಮ... ಹಾಗೆಯೇ ಬದಲಾವಣೆ ಪ್ರತಿ ಚರ ಚರಗಳಲ್ಲೂ ಆಗಿದೆ. ಆದಿಯಿಂದ ಇಂದಿನವರೆಗೆ ಅದೆಷ್ಟೋ ಬದಲಾವಣೆಗಳು ಆಗಿವೆ. ಆಹಾರ, ಅವಾಸ, ಸಂತಾನೋತ್ಪತ್ತಿ, ಜೇವಿತಾವಧಿ ಹೀಗೆ ನಾನಾ ಆಯಾಮಗಳಲ್ಲಿ ಬದಲಾವಣೆಗಳಾಗಿವೆ. ಈ ತೆರನಾದ ಬದಲಾವಣೆ ಮನುಷ್ಯನಲ್ಲಿ ವ್ಯಾಪಕವಾಗಿ ಆಗಿವೆ.ಅನೇಕ ಸಸ್ಯಾಹಾರಿಗಳು ಮಾಂಸ ಹಾರಿಗಳಾಗಿದ್ದಾರೆ. ಅನೇಕರು ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನುವುದು ಗಣನೀಯವಾಗಿ ಕಡಿಮೆಯಾಗಿದೆ. ಸೌದೆ ಒಲೆಯಲ್ಲಿ ಅಡಿಗೆಯೂ ವಿರಳವಾಗಿದೆ. ಹಾಗೆ ಬಹಳ ಜನರ ಅರೋಗ್ಯವೂ ಹದಗೆಟ್ಟು  ಜನರ ಬದುಕುವ ವಿಶ್ವಾಸವನ್ನು ಕುಗ್ಗಿಸಿ ಅಪಾರ ಪ್ರಾಣಹಾನಿ ಧನ ಹಾನಿಯನ್ನು ಮಾಡಿದೆ.

ಬದಲಾವಣೆಗಳು ಅನೀರೀಕ್ಷಿತ.. ಆದರೆ ಬದಲಾದ ದಿನಮಾನಗಳಲ್ಲಿ ಅದ್ರಲ್ಲೂ ಮನುಷ್ಯ   ಮತ್ತು  ಮನುಷ್ಯ ಆಶ್ರಿತ ಜೀವಿಗಳು ಬದಲಾವಣೆಗಳಿಗೆ ಬಹುಬೇಗ ಒಗ್ಗಿಕೊಳ್ಳಬೇಕಾಗತ್ತೆ.ಈಗಾಗಲೇ ಒಗ್ಗಿಕೊಂಡಾಗಿದೆ.ಈಗಾಗಲೇ ವಂಶವಾಹಿನಿಗಳು ಅದೇ ತೆರನಾದ ಜೀವಿಗಳಿಗೆ ಸಾಕ್ಷಿಯಾಗಿವೆ. ಉದಾಹರಣೆಗೆ ಆ ರುದ್ರಮ್ಮ ನ ಎಮ್ಮೆ ಮೊಟ್ಟೆ, ಚಿಕನ್, ಮೀನುಮುಳ್ಳು ಹಾಕಿದ ನೀರನ್ನು ಯಾವ ಕಿರಿ ಕಿರಿ ಇಲ್ಲದ ಹೇಗೆ ಕುಡಿಯುತ್ತಿತ್ತೋ ಅದರ ಮಗಳು ಕೂಡ ಅಕ್ಷರಷಹಃ  ಹಾಗೆ ಕುಡಿಯುತಿತ್ತು. ಅದರ ಕರುವಿಗೂ non veg mixed ಮುಸುರೆ ಅಂದ್ರೆ ಭಲೇ ಇಷ್ಟ... ಹೀಗೇ ಎಲ್ಲಜೀವಿಗಳು ಪರಿಸರ ಮತ್ತು ಇಲ್ಲವಾದರೆ ಆ ಜೀವಿಯ ನಾಮವಶೇಷಕ್ಕೆ ಚರಮಗೀತೆ ಹಾಡಿದಂತೆಯೇ ಸರಿ...

ಸಂಸ್ಕೃತೀಕರಣ  ಎಂದರೇ ಆಚರಣೆಗಳನ್ನು ಉನ್ನತಿಕರಣಗೊಳಿಸಿಕೊಳ್ಳುವುದಾಗಿದೆ.ಇದು ಪ್ರಾಣಿ ಪಕ್ಷಿಗಳಲ್ಲಿ ತುಸು ಉತ್ತಮ..ಆದರೆ ಇಲ್ಲಿ ಕೆಲವು ಕೆಳಮುಖ,ಅಡ್ಡದಿಡ್ಡಿಯಾದ
ಚಲನೆ, ಕೆಲವು ಪ್ರಾಣಿ ಪಕ್ಷಿಗಳು ತಮ್ಮ ಆಹಾರ ಅಭ್ಯಾಸಗಳನ್ನು ವಿಭಿನ್ನವಾಗಿ ಮೇಲಮುಖ ಮತ್ತು ಹೊಂದಿಕೊಳ್ಳುವoತಹ upgrade ಮಾಡಿಕೊಂಡಿವೆ. ಇದನ್ನು ನನ್ನ ಪ್ರಕಾರ 'ಪ್ರಕೃತೀಕರಣ' ಎನ್ನಬಹುದಾದರೆ ಯುವ ಸಮುದಾಯ ಆಹಾರ ಪಾನೀಯ ವಿಚಾರದಲ್ಲಿ ಅನಾಹುತ ಬದಲಾವಣೆಗಳನ್ನು ಮಾಡಿಕೊಂಡಿರುವುದು  ಗಂಡಾಂತರಕಾರಿ... ಇದು ವಿಕೃತ ಮತ್ತು ವಿನಾಶಕಾರಿ ಎನ್ನಬಹುದು..

✍️  _ನಾಗೇಂದ್ರ ಬಂಜಗೆರೆ._

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..