ಬೀಸುವ ಕಲ್ಲೂ -ಬಿಸಿ ಇಡ್ಲಿ ವಡೆಯೂ...
#ಬೀಸುವ_ಕಲ್ಲು_ಇಡ್ಲಿವಡೆಯೂ...
ಅದು 1991-92 ಇರಬಹುದು.ನಮ್ಮದು ಒಂದು ತೆಂಗಿನ ತೀರು ಹಾಕಿ ಕಟ್ಟಿದ್ದ ಮಾಳಿಗೆಯ ಒಂದು ಕೊಟ್ಟಿಗೆ.ಅದು ಮಳೆ ಬಂದಾಗ ದನಗಳ ಕೊಟ್ಟಿಗೆಯಾಗಿಯೂ, ಮಳೆ ಇಲ್ಲದೇ ಇದ್ದಾಗ ನಮ್ಮಗಳ ಕೊಟ್ಟಿಗೆಯಾಗಿಯೂ ಆಗಿತ್ತು. ಅದರ ಒಂದು ಮೂಲೆಯಲ್ಲಿ ಒಂದು ಒಳ್ಳು ಮತ್ತು ಬೀಸುವ ಕಲ್ಲು. ನನಗೆ ಮತ್ತು ನಮ್ಮ ಪಟ್ಟಾಲಂ ಗೆ ಆ ಬೀಸುವ ಕಲ್ಲನ್ನು ತಿರುಗಿಸುವ ಶಕ್ತಿ ಆಗ ಇಲ್ಲದೇ ಇದ್ದುದರಿಂದ ಆಗಾಗ ಒನಕೆ ಹಿಡಿದು ಏನೇನೋ ಕಾಯಿಗಳು, ಹಲ್ಲಿನಿಂದ ಕಚ್ಚಲಾಗದ ಪದಾರ್ಥಗಳನ್ನು ಜಜ್ಜಿ ತಿನ್ನುತ್ತಿದ್ದೆವು. ಕೆಲವು ಅಪರೂಪದ ದಿನಗಳಲ್ಲಿ ಅಪ್ಪ ಅಮ್ಮ ಕೂಲಿ ಹೊತ್ತು ತರುವಷ್ಟರಲ್ಲಿ ಹೊತ್ತು ಮುಳುಗಿರುತಿತ್ತು. ಕೂಲಿ ಹೋದವರ ಹೊಲಗದ್ದೆಗಳಲ್ಲೋ, ಅಥವಾ ಕೂಲಿಯಿಂದ ಮನೆಗೆ ಬರುವಾಗ ಹಾದು ಬರುತಿದ್ದ ಹೊಲಗಳಲ್ಲಿಯೋ ಟೊಮೇಟೊ, ನಾಟಿ ಬೆಂಡೆ ಕಾಯಿ, ತೊಗರಿ ಕಾಯಿ'ಕಡಲೆಕಾಯಿ ಇವುಗಳನ್ನು ನಾವು ನನಗೆಚ್ಚು-ನಿನಗೆಚ್ಚು ಎಂದು ಬಡಿದಾಡಿಕೊಂಡು ತಿನ್ನಲು ಶುರು ಮಾಡಿದರೆ ಇತ್ತ ಅಮ್ಮ ಆಗ ತಾನೇ ಕೂಲಿಯಾಗಿ ತಂದ ರಾಗಿ, ಜೋಳ, ಭತ್ತದ ಕಾಳುಗಳನ್ನು ಬೀಸಿ ನುಚ್ಚು ಮಾಡಲೋ ಅಥವಾ ಹಿಟ್ಟು ಮಾಡಲೋ ಶುರು ಮಾಡುತಿದ್ದರು. ಬೀಸುವಕಲ್ಲಲ್ಲಿ ಬೀಸಬೇಕಿತ್ತು. ಹಗಲೆಲ್ಲಾ ಕೂಲಿ ಕೆಲಸ ಮಾಡಿ ಸುಸ್ತಾಗಿರುತಿದ್ದವರು ಎಡಗೈ -ಬಲಗೈ ಎಂದು ನೂರೆಂಟು ಸರಿ ಬೀಸುವ ಕಲ್ಲು ತಿರುಗಿಸಿ ಕಾಳುಗಳು ನುಚ್ಚಾಗಿ, ನುಚ್ಚು ಹಿಟ್ಟು ಆಗುವಷ್ಟರಲ್ಲಿ ನಮಗೆ ಆಗ ತಿಂದಿದ್ದ ಟೊಮೇಟೋ, ತೊಗರಿ,ಕಡಲೇ ಕಾಯಿ, ಬೆಂಡೆಕಾಯಿಗಳೂ ಜೀರ್ಣವಾಗಿ ಹೊಟ್ಟೆ ಚುರುಗುಟ್ಟುತ್ತಿತ್ತು.! ಹಿಟ್ಟು ಸಿದ್ದವಾಗುವಷ್ಟರಲ್ಲಿ ಮುದ್ದೆಗಾಗಿ ಹೆಸರಿಟ್ಟಿದ್ದ ನೀರಿಗೆ ನುಚ್ಚು ಹಾಕಿ ಬೇಯಿಸಿ, ಹಿಟ್ಟು ಹಾಕಿ ಮುದ್ದೆ ಆಗುವಷ್ಟರಲ್ಲಿ ಕನಿಷ್ಠ ಎಂಟು ಗಂಟೆ ಆಗಿರುತ್ತಿತ್ತು!.ಅಂದರೆ ಹಿಟ್ಟು ಬೀಸಿಕೊಂಡು ಊಟ ರೆಡಿ ಆಗುವಷ್ಟೋತ್ತಿಗೆ ಬರೋಬ್ಬರಿ ಎರಡು ತಾಸು ಬೇಕಾಗಿತ್ತು. ನಿದ್ದೆ ಗಣ್ಣಲ್ಲೇ ಅಷ್ಟೋ ಇಷ್ಟೋ ತಿಂದು ಉಳಿದ ತಂಗಳು ಮರುದಿನ ಪೂರ್ಣ ಆಹಾರವಾಗಿ ನಮಗೆ ದಕ್ಕುತಿತ್ತು. ಇದು ಅಂದು ಸಮಾಜದಲ್ಲಿ ಒಂದಷ್ಟು ಜನರ ನಿತ್ಯ ಬದುಕು ಹೀಗೆ ಇತ್ತು. ಹಿಟ್ಟಿನ ಗಿರಣಿ ಪ್ರವರ್ಧಮಾನಕ್ಕೆ ಬಂದಿತ್ತಾದರೂ ಹೊಟ್ಟೆ ಹಸಿದಾಗ ಹಿಟ್ಟಿನ ಗಿರಣಿ, ಅದಕ್ಕೆ ಬೇಕಾದ ವಿದ್ಯುತ್ತು ಲಭಿಸುವುದು ದುರ್ಲಭವಾಗಿತ್ತು. ಯಾರ ಮನೆಯಲ್ಲಿ ಬೀಸುವಕಲ್ಲು, ಒಳ್ಳು ಇರುವವರು ಯಾರ ಹಂಗೂ ಇಲ್ಲದೇ ಯಾವಾಗ ಬೇಕಾದರೂ ಕಾಳು ಬಿಸಿಯೋ,ಭತ್ತ ಕುಟ್ಟಿಯೋ ಬೇಯಿಸಿ ತಿನ್ನಬಹುದಿತ್ತು. ಆದರೆ ಆಗಿನ ದಿನಮಾನಗಳಲ್ಲಿ ಒಳ್ಳು ಮತ್ತು ಬೀಸುವ ಕಲ್ಲು ಇಲ್ಲದ ಅದೆಷ್ಟೋ ಕುಟುಂಬಗಳು ಸಮಾಜದಲ್ಲಿ ಇದ್ದವು. ಅವರಿಗೆ ಏನಾದರೂ ಬೀಸಬೇಕು ಅಥವಾ ಕುಟ್ಟಿಕೊಳ್ಳಬೇಕು ಎಂದರೆ ಬೇರೆಯವರ ಮನೆಗೆ ಹೋಗಿ ಅಂಗಲಾಚಬೇಕಾಗಿತ್ತು. ಅದೆಷ್ಟೋ ಗ್ರಾಮಗಳಲ್ಲಿ ಶ್ರೀಮಂತರ ಮನೆಗಳ ಪಡೆಸಾಲಗಳಲ್ಲಿ, ದೇವಸ್ಥಾನಗಳ ಪಡಸಾಲೆಗಳಲ್ಲಿ ವಿವಿಧಉದ್ದೇಶಗಳಿಗೆ ಒಳ್ಳು, ರುಬ್ಬುವ ಗುಂಡು ಹಾಕಿರುತಿದ್ದರು. ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಅದೆಷ್ಟೋ ಒಳ್ಳುಗಳು ಪ್ರತಿ ಸುತ್ತು ಸುತ್ತಿನಲ್ಲೂ ಇದ್ದಾವೆ. ಮೇಲ್ದುರ್ಗದ ರಕ್ಷಣಾ ಕೋಟೆಯ ಸುತ್ತಾ ಹಾಸು ಬಂಡೆ ಗಲ್ಲುಗಳಲ್ಲಿ ಅಂದಿನ ಕಾವಲುಗಾರರು ಕೆಲಸ ಮಾಡುವ ಸ್ಥಳಗಳಲ್ಲಿಯೇ ಬೀಸಿಕೊಳ್ಳಲು ಒಳ್ಳುಗಳನ್ನು ಮಾಡಿಕೊಂಡಿರುವುದು ಅಸಂಖ್ಯಾತ ಸಂಖ್ಯೆಯಲ್ಲಿ ಇಂದಿಗೂ ಕಾಣಬಹುದು. ಒನಕೆ ಅದೆಷ್ಟು ಪರಿಚಿತ ಆಗಿತ್ತು ಅನ್ನೋದಕ್ಕೆ ಹೈದೆರ್ ಆಲಿ ಸೈನಿಕರು ದುರ್ಗದ ಕೋಟೆ ಮುತ್ತಿದಾಗ ಓಬವ್ವನ ಕೈಗೆ ಅಂದು ಸಿಕ್ಕಿದ್ದು ಒನಕೆಯೇ... ಯಾಕಂದ್ರೆ ನಿತ್ಯ ಬಳಕೆಯ ವಸ್ತುಗಳಲ್ಲಿ ಒನಕೆ ಒಂದಾಗಿತ್ತು ಎಂಬುದಕ್ಕೆ ಇದು ಉದಾಹರಣೆ. ಇದೆಲ್ಲಾ ಒಬೆರಾಯನ ಕಾಲದ flash back ಆದರೆ ಈಗಿನ ಡಿಜಿಟಲ್ ಕಾಲದ ಕತೆ Very interesting...
ನನಗೆ ಅದ್ಯಾಕೋ ಇಡ್ಲಿ ಕಂಡರೆ ಅದೊಂದು ರೋಗದ ತಿನಿಸು ಎಂದು, ಅದನ್ನು ತಿನ್ನುವಂತ ರೋಗ ಆದರೂ ನನಗೇನು ಬಂದಿದೆಯೆಂದೂ ಇಡ್ಲಿಯ ಬಗ್ಗೆ ನನ್ನ ಮನದಲ್ಲಿ ಸ್ವಲ್ಪವೂ ಆಸೆಯೂ, ಗೌರವವೂ ಇಲ್ಲದೇ 'ನಿಕೃಷ್ಠ'ವಾಗಿ ಕಾಣುವ ತಿನಿಸು. ನಮ್ಮ ಮನೆಯಲ್ಲಿ ಮನೆಯಒಡತಿಯೇ ಓಲೆ ಹಚ್ಚಬೇಕೆಂಬ ನಿಯಮ ಇಲ್ಲ. ಯಾರಾದರೂ ಸರಿಯೇ... ಒಟ್ಟು ಟೈಮಿಗೆ ಸರಿಯಾಗಿ ಊಟ ತಿಂಡಿ ರೆಡಿ ಆಗುತ್ತದೆ. ಅದರ ಹಿಂದಿನ ದಿನ 12 km ನಷ್ಟು ಟ್ರೇಕ್ಕಿಗ್ ಹೋಗಿದ್ದರಿಂದ ಅವತ್ತು ಯಾಕೋ ಜ್ವರ ಬಂದಂತಹ ಮೈ ನೋವು... ಸಂಡೆಯೂ ಆದ್ದರಿಂದ ಇಬ್ಬರಿಗೂ ಎದ್ದು ಕಾಫಿಯೂ ಮಾಡದಷ್ಟು ಆಲಸ್ಯ ಕಾಡುತಿತ್ತು.. ಹಾಸಿಗೆಯಲ್ಲೇ ಬಿದ್ದುಕೊಂಡು ಏನ್ ತಿಂತೀಯಾ ಚಿಟ್ಟಿ ಎಂದು ಮಗಳಿಗೆ ಕೇಳಿದ್ದಕ್ಕೆ ಪ್ರತಿ ಸರಿಯೂ 'ಮುದ್ದೆ' ಎನ್ನುತಿದ್ದ ಚಿಟ್ಟಿ ಅವತ್ತು ಯಾಕೋ ಇಡ್ಲಿ ಎಂದು ಹೇಳಿದ್ದಳು. ನಿಜ ತಿಂತೀಯಾ ಚಿಟ್ಟಿ ಎಂದು ಕೇಳಿದ್ದಕ್ಕೆ ಮತ್ತೂ ಹುಂ ಎಂದಿದ್ದಳು. ಮಗಳು ಕೇಳುತಿದ್ದಾಳೆ ನಾವೇನೂ ದಿನ ತರಲ್ಲ ವರ್ಷಕ್ಕೆ ಒಮ್ಮೆಯೋ ಎರಡು ಬಾರಿಯೋ... ಎಂದೇನಿಸಿ ಮುಖಕ್ಕೆ ನೀರೇರಾಚಿಕೊಂಡು ಸಿಟಿ ಕಡೆ ಬಂದೆ. ಭಾನುವಾರ ಈ ಸಿಟಿ ಮಂದಿ ಎಲ್ಲರೂ ಇಡ್ಲಿ -ವಡಾ ತಿನ್ನುವ ರೋಗವೊಂದು ಬಂದಂತಿದೆ. ಇತ್ತೀಚಿಗೆ ಕೆಲವು ಇಡ್ಲಿ ವಡಾ ಹೋಟೆಲ್ ಗಳಲ್ಲಿ ಜನ ಜಾತ್ರೆ.!ಇಡ್ಲಿ-ವಡಾ ತೆಗೆದುಕೊಳ್ಳಲು ಸರತಿ ಸಾಲು!. ಇಡ್ಲಿ ಎಂದರೇ ವಾಕರಿಕೆ ಬರುವ ನನಗೆ ಇಂತಹ ವಸ್ತುವನ್ನು ತಿನ್ನಲು, ಕೊಳ್ಳಲು ಈ ಪರಿ Q ನ ಎಂದು ಎನಿಸಿತು. ಇಷ್ಟು ಜನ ಇದ್ದಾರೆಂದರೆ ಬಹುಶ ಇಡ್ಲಿ -ವಡಾ ಬಹಳ ಚನ್ನಗಿರಬೇಕು ಎನಿಸಿ ನಾನೂ ಸರತಿಯಲ್ಲಿ ಸೇರಿಕೊಂಡೆ. ನನ್ನ ಮುಂದೆ 10-12 ಜನ ಇದ್ದರು.ಎಲ್ಲರಿಗೂ ಅವಸರ.ಇಲ್ಲಿ ಕೊಡಿ. ನನಗೆ ಕೊಡಿ ಎಂದು ಒಬ್ಬರದು ಐದು ಪ್ಲೇಟ್, 6 ಪ್ಲೇಟ್, 10-10 ಪ್ಲೇಟ್ ವರೆಗೂ ಪಾರ್ಸೆಲ್!. ಕೌಂಟರಲ್ಲಿ ಇಡ್ಲಿ ಕಟ್ಟಲು ಇಡ್ಲಿ ರೆಡಿ ಇಲ್ಲ.!Parcel ಕಟ್ಟಿಕೊಡುವವ ಇಡ್ಲಿ-ಇಡ್ಲಿ ತೆಗಿ... ಅಂತ ಕಿಚನ್ ಕಡೆ ಕೂಗುತಿದ್ದ. ಕಿಚನ್ ಕಡೆಯಿಂದ 'ಆದಾವು ಈಗ ಕೊಟ್ಟೀನಿ.. ಅವೇನು ಬೇಯಬೇಕಾ ಬೇಡ್ವಾ?? ಇರ್ರಿ..'ಎಂದು ಹೇಳಿದ ಒಂದು ಹೆಂಗಸಿನ ಧ್ವನಿ ಕೇಳಿತು. ಇಡ್ಲಿ-ವಡಾ-ಸಾಂಬರ್ ಗಿಂತ ಬಿಸಿ ಇದ್ದ ಆ ಅಸ್ಸಾಮಿ 'ಸರ್... ಅವಸರ ಮಾಡಬೇಡಿ..10-15 ನಿಮಿಷ ಆಗತ್ತೆ... ಅವಸರ ಇರೋರು ಹೋಗಿಬಿಡಿ' ಎಂದು ಖಡಕ್ಕಾಗಿ ನುಡಿದರು.ಅವರು ಹಾಗೆ ಹೇಳುವ ಹೊತ್ತಿಗೆ Q ನಿಂತು ಕನಿಷ್ಠ 15-20 ನಿಮಿಷ ಆಗಿತ್ತು.ಹೋಟೆಲ್ ಇಟ್ಕೊಂಡಿರೋರ್ ನೀವು... ಹೋಗಿಬಿಡ್ರಿ ಅಂತ ಹೇಳಂಗಿಲ್ಲ. ಬಂದು ಒಂದು ಗಂಟೆ ಆಯಿತು.. ಎಂದು ಕೆಲವರು ರಾಗ ತೆಗೆದರೆ ಕೊನೆ ಕೊನೆಗೆ ಇದ್ದ 3-4 ಜನ ಹೋಗಿಬಿಟ್ಟರು. ಈ ರೋಗದ ಇಡ್ಲಿ ತಿನ್ನಾಕ್ ಬಂದು ಇವನತ್ರ 15-20 ನಿಮಿಷ ಕಾದ್ರೆ ಕೊಡ್ತೀನಿ.. ಇಲ್ಲಾ ಹೋಗ್ಬಿಡ್ರಿ ಅಂತ ಹೇಳಿಸಿಕೊಂಡು ಇಡ್ಲಿ ತಗಳುವ ಅನಿವಾರ್ಯ ಏನಿದೆ ಅಂತ ಅನಿಸಿತು. ಮನೇಲಿ ಧೈರ್ಯ ಮಾಡಿ ಒಲೆ ಹಚ್ಚಿದ್ರೆ ದಿನ ಪೂರಾ ಆಗುವಷ್ಟು ಅಡುಗೆ ಮಾಡಿಬಿಡಬಹುದಿತ್ತು. ಇವು ಯಾವೋ ಇಡ್ಲಿ ತಗಳಕೆ ಬಂದು ಒಳ್ಳೆ ಪೇಚಟಕ್ಕೆ ಸಿಲುಕಿದಂತಾಯಿತು. ಆದರೂ ಮಗಳು ಕೇಳಿದ್ದಳಲ್ಲ ಎಂಬ ಒಂದೇ ಕಾರಣಕ್ಕೆ ನಿಂತು, ಕಾದು ಇಡ್ಲಿ ತಂದಾಯಿತು. ಮನೆಗೆ ಬರುವ ಹೊತ್ತಿಗೆ 1 ಗಂಟೆಗೆ ಅಧಿಕ ಸಮಯ ವ್ಯರ್ಥ ಆಗಿತ್ತು.! ಆಗ ನೆನಪಾಗಿದ್ದು ನಮ್ಮ ಬಾಲ್ಯದ ಮೇಲೆ ಹೇಳಿದ flash back.
30-40 ವರ್ಷದ ಹಿಂದೆ ರಾಗಿ, ಜೋಳ, ಭತ್ತ ತಂದು ಬೀಸಿ, ಬೇಯಿಸಿಕೊಂಡು ತಿನ್ನಲು ಟೈಮ್ ಇತ್ತು. ಆದರೆ ಈಗ ಮನೆಯಲ್ಲಿ ರೆಡಿ ಅಕ್ಕಿ, ಬೇಳೆ ಎಲ್ಲಾ 2-3 ತಿಂಗಳು ಆಗುವಷ್ಟು ರೇಷನ್ ಮನೇಲಿದ್ರೂ b 10-20 ನಿಮಿಷ ಅಡುಗೆ ಮಾಡುವ ತಾಳ್ಮೆ ಯಾರಿಗೂ ಇಲ್ಲ. ಎಲ್ಲಿಗೆ ಬಂತು ನಮ್ಮ ಜೀವನ??? ಎಲ್ಲವೂ online..ಈಗ ಒನಕೆಗಳು ಕೇವಲ ವಸ್ತು ಸಂಗ್ರಾಹಲಯದಲ್ಲಿ ಸೇರಿ ದಶಕಗಳೇ ಆದವು. ಒಳ್ಳು,ರುಬ್ಬುವ ಗುಂಡು ರಸ್ತೆಗೆ ಬಿದ್ದು ಉರುಳಾಡುತ್ತಿವೆ.ಈಗಿನ ಮಕ್ಕಳಿಗಂತೂ ಇವುಗಳ ಬಗ್ಗೆ ತಿಳಿದೇ ಇಲ್ಲ. ಯಂತ್ರಗಳ ಜೊತೆಗೆ ನಮ್ಮ ಯಾಂತ್ರಿಕ ಜೀವನ ಸಾಗುತ್ತಿದೆ.
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ