ಟ್ವಿಲೈಟ್...

ಟ್ವಿಲೈಟ್...

ಇದು 34-35 ವರ್ಷದ ಹಿಂದಿನ ಸಂದರ್ಭ... ಆಗ ನಮ್ಮ ಮನೆಯಲ್ಲಿ ಸಮಯವನ್ನು ತಿಳಿಸುವ ಸಾಧನಗಳು ಯಾವೂ ಇರಲಿಲ್ಲ.ನಮ್ಮ ತಂದೆಯವರು  ಸೂರ್ಯ,ಚಂದ್ರ ನಕ್ಷತ್ರ ಹೀಗೆ ನಿಸರ್ಗದ  ಸಂಗತಿಗಳನ್ನು ವೀಕ್ಷಿಸಿ ಸಮಯವನ್ನು ತಿಳಿಸುತಿದ್ದರು.   ಕೋಳಿ ಗಡಿಯಾರಕ್ಕೆ ಇದ್ದ ಪರ್ಯಾಯವಾಗಿತ್ತು. ಮುಂಗೋಳಿಯ ಕೂಗೇ  ಬೆಳಗಿನ ಮೂರು ವರೆ ಮೂರು ಮುಕ್ಕಾಲರ ಸಮಯ. ಒಕ್ಕಲು ಕಟ್ಟಲು, ದೂರದ ಪಯಣ ಹೀಗೆ ವರ್ಷದಲ್ಲಿ 10-15 ದಿನ ನಾನಾ ಕಾರಣಗಳಿಗೆ ಎದ್ದೇಳುತಿದ್ದೆವು. ಡಿಸೆಂಬರ್,ಜನವರಿ, ಫೆಬ್ರವರಿ ತಿಂಗಳಿಗಳಲ್ಲಿ ವಿಪರೀತ ಚಳಿ ಇದ್ದರೆ, ಏಪ್ರಿಲ್ ಮೇ ತಿಂಗಳಲ್ಲಿ ಸಹಿಸುವಷ್ಟು ಚಳಿ ಇರುತಿತ್ತು.ಮುಂಗೋಳಿಗಳು ಏನೋ ಒಮ್ಮೆಯೋ ಎರಡು ಬಾರಿಯೋ ಕೂಗಿ ಪುನಃ ಮಲಗುತಿದ್ದವು. ಚಳಿಗೆ ನಡುಗುತಿದ್ದದ್ದು ನಾವು.ಸಾಮಾನ್ಯವಾಗಿ ಮುಂಗೋಳಿಗಳು ಕೂಗಿದಾಗ ಎದ್ದರೆ ಮೂಡಣಕ್ಕೆ ಬೆಳ್ಳಿಚುಕ್ಕೆಯೂ ಮೂಡಿರುತ್ತಿರಲಿಲ್ಲ...!ಬೆಳ್ಳಿ ಚುಕ್ಕಿ ಮೂಡಿದ ಮೇಲೆ  ಇತರೆ ಪಕ್ಷಿಗಳ ಚಿಲಿಪಿಲಿ ಆರಂಭವಾಗುತಿತ್ತು.ಇತ್ತ ಬದುಕಿಗಾಗಿ ಡ್ಯೂಟಿಗೆ ಹೋಗಿದ್ದ ನಿಶಾಚರಿಗಳಾದ ಗೂಬೆ, ಬಾವಲಿ, ಬೆಕ್ಕು, ಕರಡಿ,ನರಿ, ಮೊಲ,ಕಾಡು ಹಂದಿಗಳು ಪೊದೆ ಸೇರಿದರೆ,ಇಲಿ-ಹೆಗ್ಗಣಗಳು ಬಿಲ ಸೇರಿಕೊಳ್ಳುತ್ತಾವೆ.ಮೂಡಣದ ದಿಗಂತದಲ್ಲಿ ಬೆಳಕಿನ  ಹರಿವು ಹೆಚ್ಚಿದಂತೆಲ್ಲಾ  ಎಲ್ಲಾ ಪಕ್ಷಿ ಸಂಕುಲ ಆಹಾರವನ್ನು ಹುಡುಕಲು ಫೀಲ್ಡ್ ಗೆ ಇಳಿಯುತ್ತಿದ್ದವು. ಹಣ್ಣು ತಿನ್ನುವ ಪಕ್ಷಿಗಳು ಹಣ್ಣಿನ ಮರ ಗಿಡಗಳನ್ನು ಹುಡುಕಿ ಹೋದರೆ, ಕ್ರಿಮಿ ಕೀಟಗಳನ್ನು ತಿನ್ನುವ ಪಕ್ಷಿಗಳು ಗೆದ್ದಲು ಹತ್ತಿದ ಕಡ್ಡಿ ಕಸಗಳನ್ನು ಕೆರೆಯುತಿರುತ್ತಿದ್ದವು. ಬಾನಿನಲ್ಲಿ ಸೂರ್ಯ ಕಾಣುವ ಹೊತ್ತಿಗೆ ಹಗಲು ಸಂಚಾರಿ ಪ್ರಾಣಿ- ಪಕ್ಷಿಗಳಿಗೆ ಕನಿಷ್ಠ ಕವಳವಾದರೂ ಸಿಕ್ಕಿರುತಿತ್ತು. ಅದೆಷ್ಟೋ ಪಕ್ಷಿಗಳಿಗೆ ಭರಪೂರ ರಸ ಭೋಜನ ಆಗಿರುತಿತ್ತು.ಬೆಳಗಿನ ಅವಧಿಯಲ್ಲಿ ಸೂರ್ಯ ಇಲ್ಲದೇ, ಸೂರ್ಯ ಕಣ್ಣಿಗೆ ಕಾಣುವ ಮುನ್ನ ನಸುಬೆಳಕು ಇದೆಯಲ್ಲಾ ಇದೇ ಟ್ವಿಲೈಟ್...! ಟ್ವಿಲೈಟ್ ಅವಧಿಯನ್ನು ಸೂರ್ಯೋದಯದ ಮುನ್ನದ ಅವಧಿಯನ್ನು(dawn) ಸೂರ್ಯಸ್ತದ ಅವಧಿಯ ಹೊಂಬೆಳಕನ್ನು( dusk) 'ಟ್ವಿಲೈಟ್' ಎನ್ನುವರು. ಈ ಟ್ವಿಲೈಟ್ ಇರುವುದು 'ಗಳಿಗೆ' (24 ನಿಮಿಷ) ಆದರೂ ಜೀವ ಜಗತ್ತಿನಲ್ಲಿ ಇದೊಂದು ಅದ್ಭುತ 'ಅಮೃತಗಳಿಗೆ'.  ಹೂವುಗಳು ಅರಳುವ ಸಮಯ. ಹೂವುಗಳ ಸುವಾಸನೆ ಹೊರ ಹೊಮ್ಮಿ ಪಸರಿಸುವುದು ಇದೇ ಸಮಯದಲ್ಲಿ... ಮೊಳಕೆಯೊಡೆದ ಬೀಜಗಳು ದ್ಯುತೀ ಸಂಶ್ಲೇಷಣೆಗಾಗಿ  ಸೂರ್ಯನ ಕಿರಣಗಳ ಪಡೆಯಲು, ರಾತ್ರಿಯೆಲ್ಲಾ ಸೂರ್ಯನ ಪ್ರಭೆ ಇಲ್ಲದೇ ಮುದುಡಿದ ಎಲೆಗಳು ಬದುಕಿಗೆ ತೆರೆದುಕೊಳ್ಳುವುದು ಕೂಡ ಇದೇ ಸಮಯದಲ್ಲೇ...! ಇತ್ತ  ಹೊಟ್ಟೆಪಾಡಿಗಾಗಿ ಆಹಾರವನ್ನು ಹುಡುಕಿ ಹೊರಟ ಜೀವ ಜಗತ್ತಿಗೆ ಮೊದಲ ಮತ್ತು ಸ್ವಾದಿಷ್ಟ ಆಹಾರ ದೊರೆಯುವುದು ಮತ್ತು ಅಂತ್ಯ ಆಗುವುದು ಇದೇ ಅವಧಿಯಲ್ಲಿ. ಸುಧೀರ್ಘ ಕಾಲ್ನಡಿಗೆಯ ಪಯಣ, ಎತ್ತಿನ ಬಂಡಿ ಪ್ರಯಾಣ, ಕುದುರೆ ಸವಾರಿಯ ಪಯಣಗಳೆಲ್ಲವೂ  ದಿನವೆಲ್ಲಾ ಸಾಗಬಹುದಾದ ಮುಕ್ಕಾಲು ಭಾಗ ಗಮ್ಯವನ್ನು ತಲುಪುತ್ತಿದ್ದದ್ದು ಇದೇ 'ಹೊಂಬೆಳಕ'ಅವಧಿಯಲ್ಲೇ..!ಈ ಟ್ವಿಲೈಟ್ ಅಥವಾ ಹೊಂಬೆಳಕಿನ ಅವಧಿಯಲ್ಲಿನ ಸರ್ವ ಜೀವಿಗಳ 'POSITION' ಅವುಗಳ ಸುಖ- ದುಃಖಗಳ,ನೋವು-ನಲಿವುಗಳನ್ನು ತಿಳಿಸುವ ಸಮಯವಾಗಿದೆ. 

ಟ್ವಿಲೈಟ್ ಅವಧಿಯು ಎಲ್ಲಾ ಧರ್ಮ ಜನಾಂಗದವರಿಗೂ ಬಹು ಮುಖ್ಯ ಅವಧಿ. ಸನಾತನ ಧರ್ಮದಲ್ಲಿ  ಬ್ರಾಹ್ಮೀ ಮುಹೂರ್ತದಲ್ಲಿ ಧ್ಯಾನ, ಜಪ 
ಮಂತ್ರೋಚ್ಚರಿಸಲು ಶ್ರೇಷ್ಠ ಕಾಲ ಎಂದು ತಿಳಿದರೆ,  ಗೋದುಳಿಯ ಸಮಯ ಸಂಧ್ಯಾವಂಧನೆ ಮಾಡಲು ಅತ್ಯಂತ ಪ್ರಾಶಸ್ತ ಸಮಯ ಎಂದು ಅರಿತಿದ್ದಾರೆ. ಇನ್ನೂ ಇಸ್ಲಾಂ ಕ್ರಿಶ್ಚಿಯನ್ ಧರ್ಮದಲ್ಲೂ ಬೆಳಗಿನ-ಸಂಜೆಯ ನಮಾಜ್,ಬೆಳಗಿನ ಪ್ರೇಯರ್, evening preyar ಶ್ರೇಷ್ಠ ಎಂದು ನಂಬಿದ್ದಾರೆ. ರಂಜಾನ್ ಅವಧಿಯಲ್ಲಿ ಉಪವಾಸ  ಆರಂಭ ಆಗುವುದು ಮತ್ತು ಸೂರ್ಯಸ್ತದ ನಂತರ  ಉಪವಾಸ ಬಿಡುವುದು ಇದೇ ಟ್ವಿಲೈಟ್ ಅವಧಿಯಲ್ಲಿ. 

ಟ್ವಿಲೈಟ್ ಅವಧಿಯು ಕತ್ತಲಿನಿಂದ ಬೆಳಕಿನಡೆಗೆ, ಬೆಳಕಿನಿಂದ ಕತ್ತಲಿನೆಡೆಗೆ ಕರೆದೊಯ್ಯುವ ಆರಂಭಿಕ ಸಮಯಗಳಾಗಿವೆ. ಇವೆರಡರ ಮಧ್ಯದಲ್ಲಿ ದಿನದ ಹಗಲು-ರಾತ್ರಿಗಳ ಅಸಂಖ್ಯಾತ ಜೀವಿಗಳ ಹೋರಾಟಗಳು ಅಡಗಿವೆ. ಮೂರು ಹೊತ್ತಿನ ಅನ್ನ ಬಟ್ಟೆಗಾಗಿ, ಮಕ್ಕಳು ಮರಿಗಾಗಿ ಎಲ್ಲಾ ಜೀವಿಗಳು ತಮ್ಮ ಜೀವಿತಾವಧಿಯನ್ನೇ ಮುಡಿಪಾಗಿಡಲು   ಆರಂಭದ ಅವಧಿಯೇ ಈ ಟ್ವಿಲೈಟ್ ಆಗಿದೆ.ವ್ಯಕ್ತಿಯೋರ್ವನ ಗಳಿಕೆ ಆರಂಭಿಸುವ ಮತ್ತು  ದಿನವಿಡೀ ಗಳಿಸಿದ ಗಳಿಕೆಯನ್ನು ಎಣಿಸುವ ಅವಧಿಯೇ  ಈ ಟ್ವಿಲೈಟ್.ನಾನಾ ಕನಸುಗಳೊಂದಿಗೆ ಆರಂಭವಾಗುವ  ಬದುಕು ಆ ಕನಸುಗಳ ನನಸಾಗಿಸುವ ಸಮಯ.ಮನೆಯ ಕತ್ತಲಿಗೂ, ಮನದ ಕತ್ತಲಿಗೂ ದೀಪ ಹಚ್ಚುವ ಸಮಯ, ಪ್ರಾಣಿ ಪಕ್ಷಿಗಳ ವಿಜಯ ದುಂದುಬಿ ನಾದ. ಬೀದಿ ದೀಪಗಳು ಬೆಳಗುವ, ವಿಜೃಂಬಿಸುವ ಕನಸಿನ ಸಂತೆಯಲ್ಲಿ ತಿರುಗಾಡುವ ಸಮಯ. ಇಂದಲ್ಲ ನಾಳೆ ಗೆಲ್ಲುವೆ ಎಂಬ ಆತ್ಮ ವಿಶ್ವಾಸ ತಂದು ಕೊಳ್ಳುವ ಸಮಯ. ತಮ್ಮ ಜೀವನಕ್ಕೆ ತಾವೇ ಹತಾಶೆ ಪಡುವ ಅಸಮಾಧಾನಗೊಳ್ಳುವ ಸಮಯ.ರಕ್ತ ಹೀರುವ  ಜೀವ ಜಂತುಗಳು ಎಚ್ಚರಗೊಳ್ಳುವ,ರಾಕ್ಷಸಿ ಕೃತ್ಯಗಳು, ಮಾನವ ವಿಕಾರಗಳು ಗರಿಗೆದರುವ ಸಮಯ.ಮಾಂತ್ರಿಕ, ಮಾಯಜಾಲ ಕರಾಮತ್ತು ನೆಡೆಯುವ ಸಮಯ. ಕೆಲ ವ್ಯಕ್ತಿಗಳ ಧೀರ್ಘಕಾಲದ ಕನಸುಗಳು ನನಸಾಗಲಿಲ್ಲವೆಂದರೆ ತಲೆಗೆ ಅಮಲೇರಿಸಿ ದಿನದ ನೋವು ಮರೆಯುವ ಸಮಯ .ಗೆಲವುಗಳನ್ನು ಸಂಭ್ರಮಿಸುವ ಸಮಯ, ಸಾಧಿಸುವ ಪಣ ತೋಡುವ ಸಮಯ, ಬಂಧು-ಬಾಂಧವರನ್ನು ಸಂಧಿಸುವ ಸಮಯ. ಫೋಟೋ ಗ್ರಾಫರ್ಸ್ ಗಳಿಗೆ ಗೋಲ್ಡನ್ ಮಿನಿಟ್ಸ್. ಸಸ್ಯಗಳ ಮೇಲೆ ಇಬ್ಬನಿ ಬಿದ್ದು ನಗು ಅರಳಿಸುವ ಸಮಯ.ಪಾರಿಜಾತ, ಬ್ರಹ್ಮಕಮಲಗಳಂತಹ ವಿಶೇಷ ಪುಷ್ಪಗಳು ಅರಳುವ ಸಮಯ. 
 ಪ್ರತಿ ದಿನದ ಆರಂಭ ಕನಸುಗಳೊಂದಿಗೆ ಆರಂಭವಾಗಿ ಕೆಲವೇ ಕೆಲವರ ಕನಸುಗಳು ಸಾಕಾರಗೊಳ್ಳುತ್ತವೆ. ಉಳಿದವರು ಮರು ದಿನ ಅದೇ ಕನಸುಗಳಿಂದ ಬದುಕು ಆರಂಭಿಸಬೇಕು.ದಿನ ಕತ್ತಲಾಗುವುದರೊಳಗೆ ಏನಾದರೂ ಸಾಧಿಸಬೇಕು. ಸಾಧಿಸಲಾಗದಿದ್ದರೆ ಕತ್ತಲು ಕಳೆದು  ಬೆಳಕು  ಬಂದೇ ಬರುವುದು ಎಂಬುದನ್ನು ಅರಿತು ಸಾಧಿಸಲು ಸಿದ್ದರಾಗಬೇಕು.

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..